ನಾಪೋಕ್ಲು, ಫೆ. ೨೧: ಇಲ್ಲಿಗೆ ಸಮೀಪದ ಇತಿಹಾಸ ಪ್ರಸಿದ್ಧ ಕೊಳಲಿನ ಹಬ್ಬವೆಂದೇ ಪ್ರಖ್ಯಾತಿ ಪಡೆದಿರುವ ಅಯ್ಯಂಗೇರಿ ಯ ಶ್ರೀ ಕೃಷ್ಣ ಚಿನ್ನತಪ್ಪ ದೇವರ ವಾರ್ಷಿಕ ಉತ್ಸವ ಇಂದು ಮುಂಜಾನೆ ಅನುರಾಧ ನಕ್ಷತ್ರ ದೇವರ ಮುಹೂರ್ತದಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಪ್ರಾರಂಭಗೊAಡಿತು.
ದೇವರ ಮೂಲ ಸ್ಥಾನದಿಂದ ಶ್ರೀ ಕೃಷ್ಣನ ಕೊಳಲನ್ನು ದೇವರ ಪೂಜಾರಿ ತೆಗೆದು ದೇವಾಲಯದ ಪರಿಸರದಲ್ಲಿ ಗಂಟೆ, ಜಾಗಟೆ, ಮೇಳ, ದೇವರ ಘೋಷಗಳೊಂದಿಗೆ ನುಡಿಸುತ್ತಾ ಮೆರವಣಿಗೆಯಲ್ಲಿ ಸಾಗಿ ದೇವಾಲಯಕ್ಕೆ ಹಿಂತಿರುಗಲಾಯಿತು. ಈ ಸಂದರ್ಭ ನೆರೆದ ಭಕ್ತಾದಿಗಳಿಗೆ ಮಂತ್ರಾಕ್ಷತೆ ಪ್ರಸಾದ ವಿತರಿಸಲಾಯಿತು. ರಾತ್ರಿ ದೇವರ ಹೊಳೆಯಲ್ಲಿ ಧಾರಾ ಪೂಜೆ ವಿವಿಧ ಪೂಜಾ ವಿಧಿ ವಿಧಾನಗಳು ನೆರವೇರಿತು. ತಾ. ೨೨ ರಂದು (ಇಂದು) ಪಟ್ಟಣಿ ಹಬ್ಬ, ಎತ್ತು ಪೋರಾಟ, ತಾ. ೨೩ ರಂದು ಹರಕೆ ಒಪ್ಪಿಸುವುದು, ಅನ್ನದಾನ ಸೇರಿದಂತೆ ವಿವಿಧ ಪೂಜಾ ಕಾರ್ಯಗಳೊಂದಿಗೆ ವಾರ್ಷಿಕ ಹಬ್ಬ ಸಂಪನ್ನಗೊಳ್ಳಲಿದೆ. ಈ ದೇವತಾ ಕಾರ್ಯವನ್ನು ಬಿದ್ದಿಯಂಡ ಮತ್ತು ಚಿಂಗಡ ಕುಟುಂಬಸ್ಥರು ನಿರ್ವಹಿಸುತ್ತಿದ್ದು ಈ ವರ್ಷ ಬಿದ್ದಿಯಂಡ ಕುಟುಂಬಸ್ಥರಾದ ಹರೀಶ್ ಅವರು ದೇವರನ್ನು ಹೊತ್ತು ದೇವರ ಸೇವೆಗಳನ್ನು ನಿರ್ವಹಿಸುತ್ತಿದ್ದಾರೆ.
ಈ ಸಂದರ್ಭ ದೇವ ತಕ್ಕರು ಮತ್ತು ಆಡಳಿತ ಮಂಡಳಿ ಅಧ್ಯಕ್ಷ ಬಿದ್ದಿಯಂಡ ಶುಭಾಷ್, ಕಾರ್ಯದರ್ಶಿ ತೊತ್ತಿಯಂಡ ಜೀವನ್, ಖಜಾಂಚಿ ಆಚೀರ ಲವ, ೧೪ ಕುಟುಂಬದ ತಕ್ಕ ಮುಖ್ಯಸ್ಥರು, ಉತ್ಸವ ಸಮಿತಿ ಸದಸ್ಯರು, ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು. -ದುಗ್ಗಳ ಸದಾನಂದ