ಕೂಡಿಗೆ, ಫೆ. ೨೦ : ಪ್ರವಾಸೀ ಜಿಲ್ಲೆಯೆಂದೇ ಭೂಪಟದಲ್ಲಿ ಗುರುತಿಸಿಕೊಂಡಿರುವ ಕೊಡಗು ಜಿಲ್ಲೆಯಲ್ಲಿ ಮಕ್ಕಳಿಗೆ, ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಮನರಂಜನೆ ಒದಗಿಸುವ ನಿಟ್ಟಿನಲ್ಲಿ ಹಾಗೂ ವನ್ಯ ಪ್ರಾಣಿಗಳ ನಡುವೆ ಪ್ರೀತಿಯ ಸಂಬAಧ ಬೆಸೆಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮತ್ತೊಂದು ಆನೆ ಸಫಾರಿ ಕಾರ್ಯಚಟುವಟಿಕೆ ಆರಂಭಗೊಳ್ಳಲಿದೆ. ಪ್ರಕೃತಿ ಸಿರಿಯ ಮಡಿಲಿನಲ್ಲಿ ಆನೆ ಸಫಾರಿ ಚಟುವಟಿಕೆಗೆ ಈಗಾಗಲೇ ಸಿದ್ಧತೆಗಳು ಸಾಗಿವೆ.

ಜಿಲ್ಲೆಯಲ್ಲಿ ಹಾಲಿ ಕಾರ್ಯ ನಿರ್ವಹಿಸುತ್ತಿರುವ ದುಬಾರೆ ಹಾಗೂ ಮತ್ತಿಗೋಡು ಸಾಕಾನೆ ಶಿಬಿರದೊಂದಿಗೆ ೨೦೨೨ರಲ್ಲಿ ಹಾರಂಗಿಯಲ್ಲಿ ಮತ್ತೊಂದು ಸಾಕಾನೆ ಶಿಬಿರವನ್ನು ಪ್ರಾರಂಬಿಸಲಾಗಿದೆ. ಈ ಶಿಬಿರಗಳು ಪ್ರವಾಸಿಗರನ್ನು ತನ್ನತ್ತ ಸಳೆಯುತ್ತಿವೆ. ಹಾರಂಗಿ ವ್ಯಾಪ್ತಿಯಲ್ಲಿ ಮೂರನೇ ಸಾಕಾನೆ ಶಿಬಿರ ಆರಂಭವಾಗಿ ಮೂರು ವರ್ಷಗಳು ಕಳೆಯುತ್ತಾ ಬರುತ್ತಿರುವ ಹಿನ್ನೆಲೆಯಲ್ಲಿ ದುಬಾರೆಯಷ್ಟೇ ಪ್ರವಾಸಿಗರನ್ನು ಆಕರ್ಷಿಸುವ ಮತ್ತು ದೇಶದ ವಿವಿಧ ರಾಜ್ಯಗಳಿಂದ ಆಗಮಿಸುವ ಪ್ರವಾಸಿಗರಿಗೆ ಸಾಕಾನೆಯ ಮೇಲೆ ಸಫಾರಿ ಮಾಡುವ ಯೋಜನೆಗೆ ಅರಣ್ಯ ಇಲಾಖೆ ವತಿಯಿಂದ ಕಾಮಗಾರಿಯು ಭರದಿಂದ ಸಾಗಿದೆ.

ಸೌಂದರ್ಯ ಆರಾಧನೆಯೊಂದಿಗೆ ಸಫಾರಿ

ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಕುಶಾಲನಗರದ ನಿಸರ್ಗಧಾಮ, ದುಬಾರೆ ಮತ್ತು ಹಾರಂಗಿ ಅಣೆಕಟ್ಟೆಯ ವೀಕ್ಷಣೆಯ ಜೊತೆಯಲ್ಲಿ ಸಮೀಪ ದಲ್ಲಿರುವ ಹಾರಂಗಿ ಬಲದಂಡೆಯ ಮೇಲಿನ ಸುಮಾರು ೪೦ ಎಕರೆ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಿರುವ ವೃಕ್ಷೋದ್ಯಾನ ಹಾಗೂ ಸಾಕಾನೆ ಶಿಬಿರವು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.

(ಮೊದಲ ಪುಟದಿಂದ) ಇದರ ಸಮೀಪದಲ್ಲಿ ಪ್ರವಾಸಿಗರಿಗೆ ಸಂಜೆಯ ಸೂರ್ಯಾಸ್ತಮಾನ ವೀಕ್ಷಣೆಗೂ ಅರಣ್ಯ ಇಲಾಖೆ ವತಿಯಿಂದ ಅನುಕೂಲ ಕಲ್ಪಿಸಲಾಗಿದೆ. ಜೊತೆಯಲ್ಲಿ ಹಾರಂಗಿ ಹಿನ್ನೀರಿನಲ್ಲಿ ಪ್ರವಾಸೋದ್ಯಮ ಇಲಾಖೆ ಮೂಲಕ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಸಂಸ್ಥೆಯ ವತಿಯಿಂದ ಈಗಾಗಲೇ ಜಲಕ್ರೀಡೆ ಚಟುವಟಿಕೆ ಆರಂಭಗೊAಡಿರುವ ಹಿನ್ನೆಲೆಯಲ್ಲಿ ಸಾಕಾನೆ ಶಿಬಿರದ ಕೇಂದ್ರಕ್ಕೆ ದಿನಂಪ್ರತಿ ನೂರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಆಕರ್ಷಣೀಯವಾಗಿ ಮನಸೆಳೆಯುವ, ಸಾಕಾನೆ ಸಫಾರಿ ವ್ಯವಸ್ಥೆ ಮಾಡಲು ಇಲಾಖೆ ಸೂಚನೆಯಂತೆ ಪ್ರವಾಸಿಗರಿಗೆ ಸಾಕಾನೆ ಮೇಲೆ ಹತ್ತಲು ಬೇಕಾಗುವ ಮೆಟ್ಟಿಲುಗಳ ವ್ಯವಸ್ಥೆ ರ‍್ಯಾಂಪ್) ನಿರ್ಮಾಣ ಕಾರ್ಯ ನಡೆದಿದೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್ ಕುಮಾರ್ ತಿಳಿಸಿದ್ದಾರೆ.

ಆರು ಆನೆಗಳ ಮೇಲೆ ಸಫಾರಿ

ಸಾಕಾನೆ ಶಿಬಿರದಲ್ಲಿ ಏಕದಂತ, ಲಕ್ಷ್ಮಣ, ಕರ್ಣ, ಈಶ್ವರ, ವಿಕ್ರಮ, ರಾಮ ಸೇರಿದಂತೆ ೬ ಸಾಕಾನೆಗಳಿದ್ದು, ಆರೋಗ್ಯವಾಗಿವೆ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ಬರುವ ಪ್ರವಾಸಿಗರು ಹಾರಂಗಿಗೆ ಭೇಟಿ ನೀಡುವ ಸಂದರ್ಭದಲ್ಲಿ ಸಾಕಾನೆ ಶಿಬಿರದಲ್ಲಿ ಆನೆ ಸಫಾರಿ ಮಾಡಲು ಇಲಾಖೆ ವತಿಯಿಂದ ಬೇಕಾಗುವ ವ್ಯವಸ್ಥೆಗಳನ್ನು ಮಾಡಲಾಗಿದೆ. ಶೀಘ್ರದಲ್ಲಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ವ್ಯವಸ್ಥೆಗೆ ಸಿದ್ದತೆಗಳು ನಡೆಯುತ್ತಿರುವುದು ಕಂಡು ಬರುತ್ತಿದೆ.

ವಿದ್ಯುತ್ ಕಾರ್

ಈಗಾಗಲೇ ಶಿಬಿರದ ಮುಖ್ಯ ದ್ವಾರದಿಂದ ಸಾಕಾನೆಗಳು ಇರುವ ಸ್ಥಳಕ್ಕೆ ಒಂದು ಕಿಲೋಮೀಟರ್ ದೂರವಿರುವ ಹಿನ್ನೆಲೆಯಲ್ಲಿ ವಯೋವೃದ್ಧ ಪ್ರವಾಸಿಗರು ನಡೆದುಕೊಂಡು ಹೋಗಲು ಕಷ್ಟವಾಗಲಿದೆ ಎಂಬ ಪ್ರವಾಸಿಗರ ಮನವಿಯ ಮೇರೆಗೆ ಮುಖ್ಯ ದ್ವಾರದಿಂದ ಕೇಂದ್ರದವರೆಗೆ ಪ್ರವಾಸಿಗರಿಗೆ ಅನುಕೂಲವಾಗುವಂತೆ ವಿದ್ಯುತ್ ಚಾಲಿತ ಕಾರ್ ವ್ಯವಸ್ಥೆ ಮಾಡುವ ಚಿಂತನೆ ಅರಣ್ಯ ಇಲಾಖೆಯ ಅಧಿಕಾರಿ ಮಟ್ಟದಲ್ಲಿ ಚರ್ಚೆಗಳು ನಡೆದಿದ್ದು ಮುಂದಿನ ದಿನಗಳಲ್ಲಿ ಶಿಬಿರ ಅಭಿವೃದ್ಧಿಯ ಜೊತೆಯಲ್ಲಿ ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಕಾರ್ಯದಲ್ಲಿ ಇಲಾಖೆ ಚಿಂತನೆ ನಡೆಸುತ್ತಿದೆ ಎಂದು ರತನ್ ಕುಮಾರ್ ತಿಳಿಸಿದ್ದಾರೆ.

ಅತಿ ಶೀಘ್ರದಲ್ಲಿಯೇ ಜಿಲ್ಲೆಯಲ್ಲಿ ಮತ್ತೊಂದು ಆನೆ ಸಪಾರಿ ಕೇಂದ್ರ ಸ್ಥಾಪನೆಯಾಗಲಿದ್ದು, ಪ್ರವಾಸಿಗರಿಗೆ ಮತ್ತಷ್ಟು ಮನರಂಜನೆ ಸಿಗಲಿದೆ.

- ಕೆ.ಕೆ. ನಾಗರಾಜಶೆಟ್ಟಿ.