ಶನಿವಾರಸಂತೆ, ಫೆ. ೨೦: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಶನಿವಾರಸಂತೆ ಪೊಲೀಸ್ ಠಾಣಾ ವತಿಯಿಂದ ಹೋಬಳಿ ವ್ಯಾಪ್ತಿಯ ಸದಸ್ಯರಿಗೆ, ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರಿಗೆ ಸಂಚಾರ ಜಾಗೃತಿ ಸುರಕ್ಷತೆಯ ದೃಷ್ಟಿಯಿಂದ “ಸಂಚಾರ ಸುರಕ್ಷತಾ’’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಡಾ. ಬೆನಕ ಪ್ರಸಾದ್ ನೇತೃತ್ವದಲ್ಲಿ ಪಿಎಸ್‌ಐಗಳು, ಎಎಸ್‌ಐಗಳು ಹಾಗೂ ಸಿಬ್ಬಂದಿಗಳು ಬೈಕ್‌ಗಳಲ್ಲಿ ಹಾಗೂ ಆಟೋ ಮತ್ತು ಇತರ ವಾಹನ ಚಾಲಕರು ತಮ್ಮ ಆಟೋ ಮತ್ತು ವಾಹನಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಗುಡುಗಳಲೆ ಶಿವಕುಮಾರ ಸ್ವಾಮೀಜಿ ವೃತ್ತದವರೆಗೆ ಜಾಥಾ ನಡೆಸಿ ಬೈಪಾಸ್ ರಸ್ತೆಗಾಗಿ ಪುನಃ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡರು.

ಹೆಲ್ಮೆಟ್ ಧರಿಸಿದ್ದ ದ್ವಿಚಕ್ರ ವಾಹನ ಚಾಲಕರು ಹಾಗೂ ಸೀಟ್ ಬೆಲ್ಟ್ ಹಾಕಿದ್ದ ಕಾರು ಮತ್ತಿತರ ವಾಹನ ಚಾಲಕರಿಗೆ ಗುಲಾಬಿ ಹೂ ನೀಡಿ, ಶ್ಲಾಘಿಸಿದ ಡಾ. ಬೆನಕ ಪ್ರಸಾದ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತ ಹಾಗೂ ಹಿಟ್ ಅಂಡ್ ರನ್ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು; ಜೀವ ಹಾನಿಯಿಂದ ಕುಟುಂಬಸ್ಥರು ದುಃಖ ಅನುಭವಿಸುವಂತಾಗಿದೆ.

ಜೀವ-ಜೀವನ ಮುಖ್ಯವಾಗಿದ್ದು ರಸ್ತೆ ಸುರಕ್ಷತಾ ನಿಯಮ ಮತ್ತು ಕಾನೂನು ಖಡ್ಡಾಯವಾಗಿ ಪಾಲಿಸುವಂತೆ ಸಾರ್ವಜನಿಕರು ಹಾಗೂ ವಾಹನ ಚಾಲಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸಂಚಾರ ನಿಯಮಗಳ ಬಗ್ಗೆ ಅರಿವು ಕಾರ್ಯಕ್ರಮದೊಂದಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.

ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನ ಪರವಾನಗಿ, ವಿಮೆ ಇಲ್ಲದೆ, ಹೆಲ್ಮೆಟ್ ಧರಿಸದೆ, ಸೀಟ್ ಬೆಲ್ಟ್ ಹಾಕದೆ, ಮದ್ಯಪಾನ ಮಾಡಿ ವಾಹನ ಚಾಲಿಸಿದರೆ, ಅಪ್ರಾಪ್ತ ಮಕ್ಕಳಿಗೆ ವಾಹನ ನೀಡಿದರೆ ಇತ್ಯಾದಿ ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಆಟೋ ಹಾಗೂ ವಾಹನ ಮಾಲೀಕರು, ಚಾಲಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಸ್ಥರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.