ಮಡಿಕೇರಿ, ಫೆ. ೨೦: ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಮೆಚೂರ್ ಕಬಡ್ಡಿ ಅಸೋಸಿ ಯೇಷನ್ ಸಹಭಾಗಿತ್ವದಲ್ಲಿ, ತಾ. ೨೩ ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ರೋಟರಿ ಜಿಲ್ಲೆಗೆ ಸೇರಿದ ರೋಟರಿ ಕ್ಲಬ್ ತಂಡಗಳ ನಡುವೆ ಕಬಡ್ಡಿ ಪಂದ್ಯಾಟ ಆಯೋಜಿಸಲಾಗಿದೆ ಎಂದು ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಮಧುಸೂದನ್, ತಾ. ೨೩ ರಂದು ರೋಟರಿ ಮಿಸ್ಟಿ ಹಿಲ್ಸ್ನಿಂದ ಇದೇ ಮೊದಲ ಬಾರಿಗೆ ರೋಟರಿ ಜಿಲ್ಲೆ ೩೧೮೧ನ ರೋಟರಿ ಸದಸ್ಯರಿಗಾಗಿ ಕಬಡ್ಡಿ ಪಂದ್ಯಾಟ ಆಯೋಜಿಸಲಾಗಿದೆ. ಇದೇ ಸಂದರ್ಭ ಮಿಸ್ಟಿ ಹಿಲ್ಸ್ ವತಿಯಿಂದ ರೆಡ್ ಕ್ರಾಸ್ ಕೊಡಗು ಮತ್ತು ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಗಳ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನೂ ಆಯೋಜಿಸಲಾಗಿದೆ ಎಂದು ತಿಳಿಸಿದರು.

ರೋಟರಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ ಸಮಿತಿ ಅಧ್ಯಕ್ಷ ಜಯಂತ್ ಪೂಜಾರಿ ಮಾಹಿತಿ ನೀಡಿ, ತಾ.೨೩ ರಂದು ಬೆಳಿಗ್ಗೆ ೧೦ ಗಂಟೆಗೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಮಡ್ ಕಬಡ್ಡಿ ಪಂದ್ಯಾವಳಿಗೆ ಚಾಲನೆ ದೊರಕಲಿದೆ. ಮೊದಲ ವರ್ಷದ ಪಂದ್ಯಾಟದಲ್ಲಿ ಮಡಿಕೇರಿ, ಶನಿವಾರಸಂತೆ, ಸೋಮವಾರಪೇಟೆ, ಗೋಣಿಕೊಪ್ಪ, ವೀರಾಜಪೇಟೆ, ಆಲೂರು ಸಿದ್ದಾಪುರ, ಪಿರಿಯಾಪಟ್ಟಣ, ಹುಣಸೂರು, ಮೈಸೂರು, ಪುತ್ತೂರು, ಮಂಗಳೂರು, ಸುಳ್ಯ ಸೇರಿದಂತೆ ವಿವಿಧ ರೋಟರಿ ಸಂಸ್ಥೆಗಳ ೧೫ ತಂಡಗಳು ಪಾಲ್ಗೊಳ್ಳುತ್ತಿದೆ. ಪೈಪೋಟಿಗಿಂತ ಮನೋರಂಜನೆ ಮತ್ತು ಕ್ರೀಡಾಸ್ಪೂರ್ತಿಗೆ ಆದ್ಯತೆಯನ್ನು ನೀಡಲಾಗಿದೆ ಎಂದೂ ಜಯಂತ್ ತಿಳಿಸಿದರು.

ರೋಟರಿ ಜಿಲ್ಲಾ ಮಟ್ಟದ ಮಡ್ ಕಬಡ್ಡಿ ಪಂದ್ಯಾವಳಿಯ ಪ್ರಥಮ ಬಹುಮಾನ ವಿಜೇತರಿಗೆ ೨೫ ಸಾವಿರ ರೂ. ನಗದು, ದ್ವಿತೀಯ ಬಹುಮಾನವಾಗಿ ೧೫ ಸಾವಿರ ರೂ. ನಗದು ಮತ್ತು ತೃತೀಯ ಮತ್ತು ಚತುರ್ಥ ಬಹುಮಾನವಾಗಿ ತಲಾ ೮೦೦೦ ಸಾವಿರ ರೂ. ನಗದು ಹಾಗೂ ವಿಜೇತರಿಗೆ ಆಕರ್ಷಕ ಟ್ರೋಫಿ ನೀಡಲಾಗುತ್ತದೆ ಎಂದು ಜಯಂತ್ ಪೂಜಾರಿ ಮಾಹಿತಿ ನೀಡಿದರು.

ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ನುರಿತ ತಂತ್ರಜ್ಞರು, ತೀರ್ಪುಗಾರರು ರೋಟರಿ ಕಬಡ್ಡಿ ಪಂದ್ಯಾವಳಿಗೆ ಸಹಕಾರ ನೀಡುತ್ತಿದ್ದು ಪಂದ್ಯಾವಳಿಗೆ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಎಲ್ಲಾ ರೀತಿಯ ಸೌಕರ್ಯ ಕಲ್ಪಿಸಲಾಗಿದೆ. ಅಂದಾಜು ೪ ಲಕ್ಷ ರೂ. ವೆಚ್ಚದಲ್ಲಿ ದಾನಿಗಳ ಸಹಕಾರದಿಂದ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗುತ್ತಿದೆ ಎಂದು ಕಬಡ್ಡಿ ಪಂದ್ಯಾಟದ ಸಂಚಾಲಕರಾದ ಕಪಿಲ್ ತಿಳಿಸಿದರು..

ತಾ. ೨೩ ರಂದು ಬೆಳಿಗ್ಗೆ ೧೦ ಗಂಟೆಗೆ ನಡೆಯುವ ಕಬಡ್ಡಿ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ರೋಟರಿ ಗವರ್ನರ್ ವಿಕ್ರಂದತ್ತ, ಶಾಸಕರುಗಳಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ನಗರಸಭಾ ಪೌರಾಯುಕ್ತ ರಮೇಶ್, ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸೆಕ್ರೆಟರಿ ಹೊಸೋಕ್ಲು ಉತ್ತಪ್ಪ, ರೋಟರಿ ವಲಯ ೬ರ ಸಹಾಯಕ ಗವರ್ನರ್ ದೇವಣಿರ ಕಿರಣ್, ವಲಯ ಸೇನಾನಿ ಅನಿತಾ ಪೂವಯ್ಯ ಪಾಲ್ಗೊಳ್ಳಲಿದ್ದಾರೆ. ಸಂಜೆ ೭ ಗಂಟೆಗೆ ಮಡಿಕೇರಿಯ ರೋಟರಿ ಸಭಾಂಗಣದಲ್ಲಿ ರೋಟರಿ ಜಿಲ್ಲಾ ಗವರ್ನರ್ ವಿಕ್ರಂದತ್ತ ಅವರು ವಿಜೇತ ತಂಡಗಳಗೆ ಬಹುಮಾನ ವಿತರಿಸಲಿದ್ದಾರೆ ಎಂದು ಕಪಿಲ್ ಹೇಳಿದರು. ರೋಟರಿ ಮಾಜಿ ಸಹಾಯಕ ಗವರ್ನರ್ ಅನಿಲ್ ಎಚ್.ಟಿ. ಮಾತನಾಡಿ, ೨೦ ವರ್ಷಗಳನ್ನು ಪೂರೈಸಿರುವ ರೋಟರಿ ಮಿಸ್ಟಿ ಹಿಲ್ಸ್ ಈವರೆಗೂ ೧೨ ಜಿಲ್ಲಾ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿದೆ. ಇದೇ ಮೊದಲ ಬಾರಿಗೆ ಕಬಡ್ಡಿ ಪಂದ್ಯಾವಳಿ ಮೂಲಕ ಕಬ್ಬಡಿಯಲ್ಲಿ ರೋಟರಿ ಸದಸ್ಯರೂ ಪಾಲ್ಗೊಂಡು ಆಸಕ್ತಿ ಬೆಳೆಸಿಕೊಳ್ಳುವಂತೆ ಮಾಡುತ್ತಿದೆ. ೮೬ ರೋಟರಿ ಕ್ಲಬ್ ಗಳಿರುವ ರೋಟರಿ ಜಿಲ್ಲೆ ೩೧೮೧ನಲ್ಲಿ ಮೊದಲ ಬಾರಿಗೆ ಕಬಡ್ಡಿ ಪಂದ್ಯಾಟ ಪ್ರಾರಂಭಿಸಿರುವ ದಾಖಲೆಯೂ ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್ನದ್ದಾಗಿದೆ.

ರೋಟರಿ ಕಬಡ್ಡಿ ಪಂದ್ಯಾಟದ ವೀಕ್ಷಣೆಗೆ ಸಾರ್ವಜನಿಕರಿಗೂ ಮುಕ್ತ ಅವಕಾಶ ಇದೆ ಎಂದು ಅನಿಲ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ನ ಕಬಡ್ಡಿ ಪಂದ್ಯಾವಳಿ ಆಯೋಜಕ ಸಮಿತಿ ಪ್ರಮುಖರಾದ ಮೋಹನ್ ಪ್ರಭು, ಪ್ರಕಾಶ್ ಪೂವಯ್ಯ ಉಪಸ್ಥಿತರಿದ್ದರು.