ಗೋಣಿಕೊಪ್ಪಲು, ಫೆ. ೨೦: ಶ್ರೀಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ಮಂಗಳವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಅಜ್ಜಮಾಡ ಟಿ. ಚಂಗಪ್ಪ ಹಾಗೂ ಪೊಯಿಲಂಗಡ ಪಲ್ವಿನ್ ಪೂಣಚ್ಚ ಅವರು ೨೦೨೫-೨೦೩೦ನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.

ಶ್ರೀಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಅಜ್ಜಮಾಡ ಟಿ. ಚಂಗಪ್ಪ ಅವರು ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ೭-೫ ಮತಗಳ ಅಂತರದಲ್ಲಿ ಮೈತ್ರಿ ಅಭ್ಯರ್ಥಿ ಎಂ.ಟಿ. ಕಾರ್ಯಪ್ಪ ವಿರುದ್ಧ ಜಯ ಗಳಿಸಿದ್ದಾರೆ. ಒಟ್ಟು ೧೩ ಸದಸ್ಯ ಬಲದಲ್ಲಿ ಒಂದು ಮತ ಕುಲಗೆಟ್ಟ ಮತ ವಾಗಿರುವದಾಗಿ ಚುನಾವಣಾಧಿಕಾರಿ ಘೋಷಿಸಿದರು. ಉಪಾಧ್ಯಕ್ಷ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪೊಯಿಲಂಗಡ ಪಲ್ವಿನ್ ಪೂಣಚ್ಚ ಅವರು ಐಯ್ಯಮಾಡ ಉದಯ ಅವರ ವಿರುದ್ಧ ೭-೬ ಮತಗಳ ಅಂತರದಿAದ ಜಯ ಗಳಿಸಿದರು. ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಸಿಬ್ಬಂದಿ ಕರಣ್ ಕಾರ್ಯಪ್ಪ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದು, ಸಹಾಯಕ ರಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಓ ಜೀವನ್ ಪಿ.ಆರ್. ಕಾರ್ಯನಿರ್ವಹಿಸಿದರು.

ಹಾಲಿ ಅಧ್ಯಕ್ಷ ಅಜ್ಜಮಾಡ ಟಿ. ಚಂಗಪ್ಪ ಹಾಗೂ ವಕೀಲ ಮಚ್ಚಮಾಡ ಟಿ. ಕಾರ್ಯಪ್ಪ ಅವರು ಮಂಗಳವಾರ ಬೆಳಿಗ್ಗೆ ೧೦ ಗಂಟೆಗೂ ಮುನ್ನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ನಾಮಪತ್ರ ಸಲ್ಲಿಸಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ಪಲ್ವಿನ್ ಪೂಣಚ್ಚ ಹಾಗೂ ಐಯ್ಯಮಾಡ ಉದಯ ನಾಮಪತ್ರ ಸಲ್ಲಿಸಿದ್ದು, ೧೨.೧೦ಕ್ಕೆ ನಾಮಪತ್ರ ಪರಿಶೀಲನೆ ನಡೆಸಿದ ಚುನಾವಣಾಧಿಕಾರಿ ಕರಣ್ ಕಾರ್ಯಪ್ಪ ನಾಮಪತ್ರ ಕ್ರಮಬದ್ಧವಾಗಿದೆ ಎಂದು ಘೋಷಣೆ ಮಾಡಿದರು. ೧ ಗಂಟೆಯ ನಂತರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆದು ಎಲ್ಲಾ ೧೩ ನಿರ್ದೇಶಕರು ಮತದಾನದಲ್ಲಿ ಪಾಲ್ಗೊಂಡಿದ್ದರು. ೨ ಗಂಟೆ ಸುಮಾರಿಗೆ ಮತ ಎಣಿಕೆಯಲ್ಲಿ ಅಧ್ಯಕ್ಷ ರಾಗಿ ಬಿಜೆಪಿ ಬೆಂಬಲಿತ ಅಜ್ಜಮಾಡ ಟಿ. ಚಂಗಪ್ಪ, ಉಪಾಧ್ಯಕ್ಷರಾಗಿ ಕಾಂಗ್ರೆಸ್- ಬಿಜೆಪಿ ಮೈತ್ರಿ ಅಭ್ಯರ್ಥಿ ಪೊಯಿಲಂಗಡ ಪಲ್ವಿನ್ ಪೂಣಚ್ಚ ಜಯಗಳಿಸಿ ರುವುದಾಗಿ ಚುನಾವಣಾಧಿಕಾರಿ ಘೋಷಿಸಿದರು.