ಮಡಿಕೇರಿ, ಫೆ. ೨೦: ಸಾಮಾಜಿಕ ಕಳಕಳಿಯೊಂದಿಗೆ ಸಾಹಿತ್ಯ ಕ್ಷೇತ್ರದ ಪ್ರಗತಿಗೆ ಅಪಾರ ಕೊಡುಗೆಯನ್ನು ನೀಡುತ್ತಿರುವ ಕೊಡವ ಮಕ್ಕಡ ಕೂಟ ಸಂಘಟನೆ ೧೨ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ವಾರ್ಷಿಕೋತ್ಸವದ ಪ್ರಯುಕ್ತ ಲೇಖಕಿ ಮುಕ್ಕಾಟಿರ ಮೌನಿ ನಾಣಯ್ಯ ಅವರು ರಚಿಸಿರುವ "ಆ ಒರ್ ಬೈಟ್...?" ಎಂಬ ಕೊಡವ ಮಕ್ಕಡ ಕೂಟದ ೧೦೯ನೇ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ನಗರದ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಬಯವಂಡ ಮಹಾಬಲ ಪೂವಯ್ಯ ಪುಸ್ತಕ ಬಿಡುಗಡೆ ಮಾಡಿದರು. ಸಾಹಿತಿ ಹಾಗೂ ಕೊಡವ ಮಕ್ಕಡ ಕೂಟದ ಸಲಹೆಗಾರರಾದ ಐಚಂಡ ರಶ್ಮಿ ಮೇದಪ್ಪ ಮಾತನಾಡಿ, ಭಾಷೆಯ ಬೆಳವಣಿಗೆಗೆ ಸಾಹಿತ್ಯದ ಅಗತ್ಯವಿದೆ, ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಯುವ ಪೀಳಿಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಸಾಹಿತ್ಯ ಕ್ಷೇತ್ರಕ್ಕೆ ಮಹಿಳಾ ಲೇಖಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಕೊಡವ ಮಕ್ಕಡ ಕೂಟ ಕೊಡವ ಭಾಷೆ ಮಾತ್ರವಲ್ಲದೆ ಇತರ ಭಾಷೆಗಳ ಸಾಹಿತ್ಯ ಬೆಳವಣಿಗೆಗೂ ಸಹಕಾರ ನೀಡುತ್ತಿರುವುದು ಶ್ಲಾಘನೀಯವೆಂದರು.
ಆ ಒರ್ ಬೈಟ್...? ಪುಸ್ತಕದ ಲೇಖಕಿ ಮುಕ್ಕಾಟಿರ ಮೌನಿ ನಾಣಯ್ಯ ಮಾತನಾಡಿ, ಬದುಕಿನಲ್ಲಿ ಗೆಳೆತನ ಮತ್ತು ಪ್ರೀತಿಗೆ ಇರುವ ಅಗಾಧವಾದ ಶಕ್ತಿಯನ್ನು ತೋರಿಸುವ ಸುಂದರ ಚಿತ್ರಣ "ಆ ಒರ್ ಬೈಟ್...?" ಕೊಡವ ಕಾದಂಬರಿಯಲ್ಲಿದೆ ಎಂದರು.
ಪ್ರೀತಿ, ಸ್ನೇಹದ ಹೆಸರಿನಲ್ಲಿ ಮೋಸದ ಜಾಲಕ್ಕೆ ಸಿಲುಕಿ ನೊಂದು ಬೆಂದ ಯುವಪ್ರೇಮಿಗಳ ಕಥೆ ಇದರಲ್ಲಿದೆ. ಪವಿತ್ರ ಪ್ರೀತಿಗೆ ಯಾವತ್ತೂ ಸೋಲಿಲ್ಲ ಎನ್ನುವ ಅಂಶವನ್ನು ಚಿತ್ರಿಸಲಾಗಿದೆ. ಈ ಪುಸ್ತಕ ಸಿನಿಮಾ ಮಾದರಿಯಲ್ಲಿದ್ದು, ಕಥೆಯ ಮಧ್ಯದಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಮೂರು ಹಾಡುಗಳನ್ನು ನೀಡಲಾಗಿದೆ ಎಂದು ಹೇಳಿದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಮಾತನಾಡಿ, ಆ ಒರ್ ಬೈಟ್ ಪುಸ್ತಕವು ೧೨ನೇ ವರ್ಷಚಾರಣೆಯ ಪ್ರಯುಕ್ತ ಬಿಡುಗಡೆ ಮಾಡಲಾಗಿದ್ದು, ಇದು ಸಿನಿಮಾ ಮಾದರಿಯಲ್ಲಿದ್ದು, ಇದೊಂದು ವಿಶೇಷ ಪ್ರಯತ್ನವಾಗಿದೆ. ಮುಂದಿನ ದಿನಗಳಲ್ಲಿ ಚಲನಚಿತ್ರವಾಗಿ ತೆರೆಕಾಣುವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಚಿಯಕ್‌ಪೂವಂಡ ಸಚಿನ್ ಪೂವಯ್ಯ ಹಾಗೂ ಪೊನ್ನಚೆಟ್ಟಿರ ಪ್ರದೀಪ್ ಉಪಸ್ಥಿತರಿದ್ದರು.