ಕಣಿವೆ, ಫೆ. ೧೦ : ತೂಗುಯ್ಯಾಲೆಯಲ್ಲಿ ಕುಶಾಲನಗರ ತಾಲೂಕಿನ ಚಿಕ್ಕಅಳುವಾರದಲ್ಲಿರುವ ಕೊಡಗು ವಿಶ್ವವಿದ್ಯಾಲಯವನ್ನು ರಾಜ್ಯ ಸರ್ಕಾರ ಮುಚ್ಚುವ ಹುನ್ನಾರ ನಡೆಸಿದ್ದಲ್ಲಿ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

‘ಶಕ್ತಿ'ಯಲ್ಲಿ ಪ್ರಕಟವಾದ ಮುಚ್ಚುವ ಭೀತಿಯಲ್ಲಿ ಕೊಡಗು ವಿವಿ ಎಂಬ ವರದಿ ಸಂಬAಧ ಸೋಮವಾರ ಕುಶಾಲನಗರದಲ್ಲಿ ಸಭೆ ಸೇರಿ ಚರ್ಚೆ ನಡೆಸಿದ ಕರವೇ ಪದಾಧಿಕಾರಿಗಳು ಕುಶಾಲನಗರದ ತಹಶೀಲ್ದಾರ್ ಕಿರಣ್ ಗೌರಯ್ಯ ಅವರ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು. ಕರವೇ ಪದಾಧಿಕಾರಿಗಳು, ಸ್ವಾತಂತ್ರö್ಯ ಬಂದು ೭೫ ವರ್ಷಗಳ ಬಳಿಕ ಕಳೆದ ಎರಡು ವರ್ಷಗಳ ಹಿಂದೆ ಕೊಡಗು ಜಿಲ್ಲೆಗೆ ವಿವಿ ಬಂದಿದೆ. ಆದರೆ ರಾಜ್ಯ ಸರ್ಕಾರ ಹೊಸದಾಗಿ ಬಂದ ವಿವಿ ಅಭಿವೃದ್ಧಿಗೆ ಅನುದಾನ ನೀಡದೆ ಮಲತಾಯಿ ಧೋರಣೆ ಅನುಸರಿಸಿ ಇದೀಗ ಮುಚ್ಚಲು ಹೊರಟಿರುವ ಬಗ್ಗೆ ಮಾಹಿತಿ ಲಭ್ಯವಾದ ಕಾರಣ ಸರ್ಕಾರದ ನಡೆಯನ್ನು ಖಂಡಿಸಿ ಜಿಲ್ಲಾದ್ಯಂತ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕಿ ದೀಪಾ ಪೂಜಾರಿ, ಜಿಲ್ಲಾಧ್ಯಕ್ಷೆ ಸಂಧ್ಯಾ ಗಣೇಶ್, ಕುಶಾಲನಗರ ತಾಲೂಕು ಅಧ್ಯಕ್ಷ ಅಣ್ಣಯ್ಯ, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ರೂಪಾ ಗಣೇಶ್, ಪ್ರಧಾನ ಕಾರ್ಯದರ್ಶಿ ಶೃತಿ ಗಿರೀಶ್, ಪದಾಧಿಕಾರಿಗಳಾದ ರೊನಾರ್ಡ್, ಚಂದ್ರು, ಮುರುಳಿ, ರಾಣಿ, ದಿವ್ಯಾ, ಮಂಡ್ಯ ಪರಮೇಶ್, ಶೈಲಾ ಗಣೇಶ್, ಮಂಜುನಾಥ ರೈ, ಕುಮಾರ್, ಆನಂದ ಇದ್ದರು.