ಮಡಿಕೇರಿ, ಫೆ. ೩: ೧೯೮೭ ರಿಂದ ೧೯೯೨ ರ ಜಿಲ್ಲಾ ಪರಿಷತ್‌ಗೆ ಹೆಚ್ಚಿನ ಆಡಳಿತ ಅಧಿಕಾರ ಇದ್ದ ಕಾರಣದಿಂದಾಗಿ ಕೊಡಗು ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕೆಲಸಗಳು ನಡೆಯುತ್ತಿತ್ತು.
ಅದಲ್ಲದೇ ಜಿಲ್ಲಾ ಪರಿಷತ್ ಸದಸ್ಯರು ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡದೇ ಒಂದಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಕಾರಣದಿಂದಲೇ ಜಿಲ್ಲಾ ಪರಿಷತ್ ಆಡಳಿತ ಅವಧಿಯ ಅಭಿವೃದ್ಧಿ ಕಾರ್ಯಗಳು ಪ್ರಸ್ತುತ ದಿನಗಳಲ್ಲಿಯೂ ಚರ್ಚೆಯಲ್ಲಿದೆ.
ಭ್ರಷ್ಟಾಚಾರವಿಲ್ಲದೆ, ಅಭಿವೃದ್ಧಿಗಾಗಿ ದುಡಿಯುವ ಅಧಿಕಾರಿಗಳು ಇದ್ದರು. ಮತ್ತೊಂದೆಡೆ ಜಿಲ್ಲಾ ಪರಿಷತ್ ನಿಂದ ಜಿಲ್ಲೆಯಾದ್ಯಂತ ಅಭಿವೃದ್ಧಿ ಕೆಲಸಗಳಿಗೆ ಸಂಸದರು, ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ವಿಶೇಷವಾಗಿ ಕಾಳಜಿ ವಹಿಸಿ ತಮ್ಮ ಅನುದಾನವನ್ನು ನೀಡುತ್ತಿದ್ದರು.
ಜಿಲ್ಲಾ ಪರಿಷತ್‌ನಿಂದ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವಾಗಲೇ ಅಂದು ಕೇಂದ್ರ ಸಚಿವರಾಗಿದ್ದ ಜನಾರ್ದನ ಪೂಜಾರಿ ಸೇರಿದಂತೆ ಜಿಲ್ಲಾ ಪರಿಷತ್, ಅವಧಿಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳಾಗಿದ್ದ ಎ.ಎಂ. ಬೆಳ್ಯಪ್ಪ, ಡಿ.ಎ. ಚಿಣ್ಣಪ್ಪ, ಹಿರಿಯ ಮುತ್ಸದ್ದಿಗಳಾದ ಯಂ.ಸಿ. ನಾಣಯ್ಯ, ಅಜ್ಜಿಕುಟ್ಟಿರ ಎನ್. ಸೋಮಯ್ಯ, ಸುಮಾ ವಸಂತ್, ಬಿ.ಎ. ಜೀವಿಜಯ ಸೇರಿ ಜಿಲ್ಲೆಯ ಜನಪ್ರತಿನಿಧಿಗಳು, ಅಭಿವೃದ್ಧಿಗೆ ಬೆಂಬಲ ನೀಡುತ್ತಿದ್ದರು. ಇವರೆಲ್ಲರ ಸಹಕಾರವನ್ನು ಎಂದಿಗೂ ಮರೆಯುವಂತಿಲ್ಲ ಎಂದು ಜಿಲ್ಲಾ ಪರಿಷತ್ ಮಾಜಿ ಸದಸ್ಯರು ನೆನಪಿಸುತ್ತಾರೆ.
ಬಿ. ಜನಾರ್ದನ ಪೂಜಾರಿ ಪಾತ್ರ
ಮಾಜಿ ಕೇಂದ್ರ ಸಚಿವ ಹಾಗೂ ಕೊಡಗು-ಮಂಗಳೂರು ಲೋಕಸಭಾ ಸದಸ್ಯರಾಗಿದ್ದ ಬಿ. ಜನಾರ್ದನ ಪೂಜಾರಿ ಕೊಡಗು ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರು.
ಬಿ. ಜನಾರ್ದನ ಪೂಜಾರಿ ಅವರು ಕೇಂದ್ರ ಸಚಿವರಾಗಿದ್ದ ಅವಧಿಯಲ್ಲಿ ಕೊಡಗು ಜಿಲ್ಲೆಗೆ ವಿಶೇಷ ಅನುದಾನವನ್ನು ನೀಡಿದ್ದರು. ೧೯೮೭ರ ಜಿಲ್ಲಾ ಪರಿಷತ್ ಸದಸ್ಯರುಗಳು, ಕೇಂದ್ರ ಸಚಿವರಾಗಿದ್ದ ಜನಾರ್ದನ ಪೂಜಾರಿ ಅವರಿಗೆ ಮನವಿ ಮಾಡಿದ ಪರಿಣಾಮವಾಗಿ, ಕೊಡಗಿನ ಬಹುತೇಕ ಗ್ರಾಮೀಣ ಭಾಗಗಳಲ್ಲಿ ಕೆನರಾ ಬ್ಯಾಂಕ್ ಶಾಖೆಗಳು, ಬಿ.ಎಸ್.ಎನ್.ಎಲ್. ದೂರವಾಣಿ ವಿನಿಮಯ ಕೇಂದ್ರಗಳು, ಹಾಗೂ ಸರ್ಕಾರಿ ಆಸ್ಪತ್ರೆಗಳು, ಅಂಚೆ ಕಚೇರಿಗಳು ಅಸ್ತಿತ್ವಕ್ಕೆ ಬಂದಿದ್ದವು. ಕೊಡಗು ಜಿಲ್ಲೆಯಲ್ಲಿ ಅಭಿವೃದ್ಧಿಯ ಪರ್ವ ಹಾಗೂ ಜಿಲ್ಲೆಯಲ್ಲಿ ಜನರಿಗೆ ಮೂಲಭೂತ ಸೌಕರ್ಯಗಳು ದೊರೆಯಲು ಆರಂಭಗೊAಡದ್ದು ೧೯೮೭ರ ಜಿಲ್ಲಾ ಪರಿಷತ್ ಆಡಳಿತದಿಂದಾಗಿದೆ.
ತಪ್ಪಿದ ಉಪಾಧ್ಯಕ್ಷ ಸ್ಥಾನ!
ಕೊಡಗು ಜಿಲ್ಲಾ ಪರಿಷತ್ ಅಧ್ಯಕ್ಷರಾಗಿದ್ದ ಜೆ.ಎ. ಕರುಂಬಯ್ಯ ಹಾಗೂ ಸದಸ್ಯರಾಗಿದ್ದ ಹೆಚ್.ಸಿ. ಸಣ್ಣಯ್ಯನವರು ೧೯೭೮ ರಿಂದ ೮೩ ರವರೆಗೆ ಜೆ.ಎ. ಕರುಂಬಯ್ಯ ಅಧ್ಯಕ್ಷ ಹಾಗೂ ಹೆಚ್.ಸಿ. ಸಣ್ಣಯ್ಯ ಸದಸ್ಯರಾಗಿ ವೀರಾಜಪೇಟೆ ತಾಲೂಕು ಬೋರ್ಡ್ನಲ್ಲಿ ಕಾರ್ಯ ನಿರ್ವಹಿಸಿದ್ದರು. ನಂತರ ಅಸ್ತಿತ್ವಕ್ಕೆ ಬಂದಿದ್ದ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಕೂಡ ಗೆಲುವು ಸಾಧಿಸಿದ್ದರು.
ಜೆ.ಎ. ಕರುಂಬಯ್ಯ ಅವರ ಆಡಳಿತ ಅನುಭವದಿಂದ ಕೇಂದ್ರ ಸಚಿವರಾಗಿದ್ದ ಬಿ. ಜನಾರ್ದನ ಪೂಜಾರಿಯವರು ಜೆ.ಎ. ಕರುಂಬಯ್ಯ ಅವರಿಗೆ ಅಧ್ಯಕ್ಷ ಸ್ಥಾನ ನೀಡಲು ಆಸಕ್ತಿ ಹೊಂದಿದ್ದರು. ಮತ್ತೊಂದೆಡೆ ಅಧ್ಯಕ್ಷ ಸ್ಥಾನಕ್ಕೆ ಕೆ.ಬಿ. ಶಾಂತಪ್ಪ ಹಾಗೂ ಸೋಮವಾರಪೇಟೆಯ ಕಾಂಗ್ರೆಸ್ ಸದಸ್ಯರಾಗಿದ್ದ ರಾಜಶೇಖರ್ ಪ್ರಬಲ ಆಕಾಂಕ್ಷಿ ಯಾಗಿದ್ದರು. ನಾಲ್ಕು ಗೋಡೆಗಳ ಮಧ್ಯೆ ನಡೆದ ಒಪ್ಪಂದದ ಮೂಲಕ ತಾಲೂಕು ಬೋರ್ಡ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಜೆ.ಎ. ಕರುಂಬಯ್ಯ ಅವರಿಗೆ ಅಧ್ಯಕ್ಷ ಸ್ಥಾನವನ್ನು ನೀಡಲು ಬಿ. ಜನಾರ್ದನ ಪೂಜಾರಿಯವರು ತೀರ್ಮಾನಿಸಿದ್ದರು. ಜಿಲ್ಲಾ ಪರಿಷತ್ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯ ಹಿಂದಿನ ದಿನ ಮಡಿಕೇರಿಯ ಸುದರ್ಶನ್ ಅತಿಥಿ ಗೃಹದಲ್ಲಿ ಕೇಂದ್ರ ಸಚಿವರಾಗಿದ್ದ ಬಿ. ಜನಾರ್ದನ ಪೂಜಾರಿ ಅವರ ಸಮ್ಮುಖದಲ್ಲಿ ನಡೆದ ಕಾಂಗ್ರೆಸ್ ಶಾಸಕರು, ಮುಖಂಡರುಗಳ ಹಾಗೂ ನೂತನ ಸದಸ್ಯರುಗಳ ಸಭೆಯಲ್ಲಿ ಜಿಲ್ಲಾ ಪರಿಷತ್ ಅಧ್ಯಕ್ಷ ಸ್ಥಾನವನ್ನು ಜೆ.ಎ. ಕರುಂಬಯ್ಯರಿಗೆ ಹಾಗೂ ಉಪಾಧ್ಯಕ್ಷ ಸ್ಥಾನ ಹೆಚ್.ಸಿ. ಸಣ್ಣಯ್ಯ ಅವರಿಗೆ ನೀಡಲು ಸ್ವತಃ ಜನಾರ್ದನ ಪೂಜಾರಿ ಅವರೇ ನಿರ್ಧರಿಸಿದ್ದರು. ಆದರೇ ಅಂದು ರಾತ್ರಿ ೧೧ ಗಂಟೆಯವರೆಗೆ ನಡೆದ ಸಭೆಯಲ್ಲಿ ಇಬ್ಬರೂ ಒಂದೇ ತಾಲೂಕಿಗೆ ಸೇರಿದವರಾಗಿದ್ದರಿಂದ ನಿರ್ಧಾರ ಬದಲಾಯಿಸಿ ಉಪಾಧ್ಯಕ್ಷ ಸ್ಥಾನವನ್ನು ಮಡಿಕೇರಿ ತಾಲೂಕಿಗೆ ನೀಡಲು ತೀರ್ಮಾನಿಸಿದ ಪರಿಣಾಮ ಉಪಾಧ್ಯಕ್ಷ ಸ್ಥಾನ ಅಲ್ಪಸಂಖ್ಯಾತ ಸಮುದಾಯದ ಪಿ.ಎಂ. ಖಾಸಿಂ ಅವರಿಗೆ ಒಲಿದು ಬಂದಿತ್ತು. ಉಪಾಧ್ಯಕ್ಷ ಸ್ಥಾನ ವಂಚಿತರಾದ ಸಣ್ಣಯ್ಯ ಅವರನ್ನು ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.
(ಮುಂದುವರಿಯುವುದು)
- ಕೆ.ಎಂ. ಇಸ್ಮಾಯಿಲ್ ಕಂಡಕರೆ