ಕೊಡ್ಲಿಪೇಟೆ, ಫೆ. ೩: ಸಮೀಪದ ಮಲ್ಲಳ್ಳಿ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪೂಜ್ಯ ಹೆಗ್ಗಡೆಯವರು ಮಂಜೂರು ಮಾಡಿದ ರೂ. ೧೦೦೦೦೦ ಮೊತ್ತದ ಸಹಾಯಧನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡಗು ಜಿಲ್ಲಾ ನಿರ್ದೇಶಕರಾದ ಲೀಲಾವತಿ ಅವರು ವಿತರಣೆ ಮಾಡಿ ಮಾತಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಮೂಲಕ, ಸರಕಾರಿ ಶಾಲೆಗಳಿಗೆ ಬೆಂಚ್ ಡೆಸ್ಕ್ ವಿತರಣೆ, ಜ್ಞಾನದೀಪ ಶಿಕ್ಷಕರ ನೇಮಕ, ಕೆರೆ ಅಭಿವೃದ್ಧಿ, ಹಾಲಿನ ಡೈರಿ ಅಭಿವೃದ್ಧಿ, ಸಮುದಾಯ ಭವನ, ದೇವಸ್ಥಾನಗಳ ಅಭಿವೃದ್ಧಿಗೆ ಪ್ರತಿ ವರ್ಷ ನೂರಾರುಕೋಟಿ ಸಹಾಯಧನಗಳನ್ನ ಕೊಡುವ ಮೂಲಕ ಗ್ರಾಮದ ಅಭಿವೃದ್ಧಿಗೆ ಸಹಕರಿಸುತ್ತಾರೆ ಎಂದು ತಿಳಿಸಿದರು.
ಕೊಡ್ಲಿಪೇಟೆ ವಿ.ಎಸ್.ಎಸ್.ಎನ್. ಬ್ಯಾಂಕಿನ ನಿರ್ದೇಶಕರಾದ ಬಿ.ಕೆ. ಯತೀಶ್ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹೆಗ್ಗಡೆಯವರು ಅನೇಕ ಸಮಾಜಮುಖಿ ಕೆಲಸಗಳನ್ನು ಕಳೆದ ನಲುವತ್ತು ವರ್ಷಗಳಿಂದ ಮಾಡುತ್ತಿದ್ದಾರೆ, ಅವರ ಮಾರ್ಗದರ್ಶನದಲ್ಲಿ ಸಮಾಜದಲ್ಲಿ ಪರಿವರ್ತನೆ ಆಗುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕಿನ ಯೋಜನಾಧಿಕಾರಿ ರೋಹಿತ್, ದೇವಸ್ಥಾನ ಸಮಿತಿ ಅಧ್ಯಕ್ಷರಾದ ಶಾಂತಮಲ್ಲಪ್ಪ, ಹಿರಿಯರಾದ ಪಾಲಾಕ್ಷ, ಸೇವಾಪ್ರತಿನಿಧಿ ಫಾತಿಮ ಉಪಸ್ಥಿತರಿದ್ದರು. ಮೇಲ್ವಿಚಾರಕರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.