ಮಡಿಕೇರಿ, ಫೆ. ೩: ೨೦೨೦ರಲ್ಲಿ ತಲಕಾವೇರಿಯಲ್ಲಿ ಸಂಭವಿಸಿದ ಭೂಕುಸಿತ ಸ್ಥಳದಲ್ಲಿ ಅಪಾಯ ತಡೆಗೆ ಉದ್ದೇಶಿಸಿದ್ದ ತಡೆಗೋಡೆ ನಿರ್ಮಾಣ ಕಾಮಗಾರಿ ಅಪೂರ್ಣಗೊಂಡಿದ್ದು, ಇದನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ತಲಕಾವೇರಿ ಕ್ಷೇತ್ರದ ಮುಖ್ಯಸ್ಥರಾದ ಕೋಡಿ ಮೋಟಯ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿ ಗಮನ ಸೆಳೆದರು.
ಇತ್ತೀಚಿಗೆ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭ ಅವರಿಗೆ ಮನವಿ ನೀಡಿ ಭೂಕುಸಿತ ಸಂಭವಿಸಿ ಐವರು ಸಾವನ್ನಪ್ಪಿದ್ದರು. ಅದಲ್ಲದೆ ಕ್ಷೇತ್ರಕ್ಕೆ ಸಂಪರ್ಕ ಕಡಿತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿತ್ತು. ಬಳಿಕ ಭೂಕುಸಿತ ಸಂಭವಿಸಿದ ಸ್ಥಳದ ರಸ್ತೆಯ ಕೆಳ ಭಾಗಕ್ಕೆ ಸರಕಾರದಿಂದ ೨೦ ಮೀ ಉದ್ದ, ೪.೫ ಮೀ ಎತ್ತರಕ್ಕೆ ತಡೆಗೋಡೆ ನಿರ್ಮಾಣ ಮಾಡಲು ಕ್ರಮಕೈಗೊಳ್ಳಲಾಯಿತು. ಆದರೆ, ಇನ್ನೂ ೨೦ ಮೀಟರ್ ತಡೆಗೋಡೆ ನಿರ್ಮಾಣ ಬಾಕಿಯಿದ್ದು, ಭೂಕುಸಿತ ಉಂಟಾದರೆ ದೊಡ್ಡ ಅಪಾಯ ಸಂಭವಿಸುತ್ತದೆ. ಅಲ್ಲದೆ ರಸ್ತೆಯಲ್ಲಿ ಬಿರುಕುಗಳು ಕಂಡು ಬರುತ್ತಿದ್ದು, ಮಳೆಗಾಲಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳಿಸಬೇಕಾಗಿದೆ ಎಂದು ವಿವರಿಸಿದರು.
ಬೆಟ್ಟದ ಮೇಲ್ಭಾಗದಿಂದ ಮಣ್ಣು ಜರಿಯುತ್ತಿರುವುದರಿಂದ ಅಪಾಯ ತಪ್ಪಿಸಲು ಮತ್ತೊಂದು ತಡೆಗೋಡೆ ನಿರ್ಮಾಣಕ್ಕೂ ನೆರವಾಗುವಂತೆ ಕೋರಿದರು. ಇದಕ್ಕೆ ಮುಖ್ಯಮಂತ್ರಿ ಸಕಾರತ್ಮಕ ಸ್ಪಂದನ ನೀಡಿ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ನೀಡಿದರು.