ಮಡಿಕೇರಿ, ಫೆ. ೩: ಭೂಮಿಯ ಮೇಲೆ ಬದುಕುವ ಪ್ರತಿಯೊಂದು ಜೀವಿಗಳಿಗೂ ಬದುಕುವ ಹಕ್ಕಿದೆ, ಪಕ್ಷಿಗಳ ಪಾಲಿಗೆ ನಾವೆಲ್ಲರೂ ಆಪತ್ಭಾಂದವರಾಗಬೇಕು ಎಂದು ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ಸಂಚಾಲಕಿ ರಮ್ಯ ನಿತ್ಯಾನಂದ ಶೆಟ್ಟಿ ಹೇಳಿದರು.
ಪೆರಾಜೆ ಬಳಿಕ ಕುಂಬಳಚೇರಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಗುಬ್ಬಚ್ಚಿಗೂಡು ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲಗಳ ಉಳಿವಿಗೆ ಸಸ್ಯ ರಾಶಿಗಳ ಮಹತ್ವ ಜಾಗೃತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು. ಪ್ರಾತ್ಯಕ್ಷಿಕೆಯನ್ನು ನೀಡಿ ಪಕ್ಷಿಗಳಿಗೆ ನೀರು , ಆಹಾರ ಇಡುವ ಕ್ರಮ ಹಾಗೂ ಕೃತಕ ಗೂಡುಗಳನ್ನು ಕಟ್ಟುವಾಗ ವಹಿಸಬೇಕಾದ ಜವಾಬ್ದಾರಿಯನ್ನು ವಿವರಿಸಿದರು.
ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಬಣ್ಣಕ್ಕೆ ಮರುಳಾಗಿ ಪಕ್ಷಿಗಳ ಪಾಲಿಗೆ ಕಂಟಕರಾಗದಿರಿ, ಪಕ್ಷಿಗಳ ಪಾಲಿಗೆ ನಾವು ಕಂಟಕರಾಗುವುದು ತರವಲ್ಲ ಎಂದು ಹೇಳಿದರು. ಶಿಕ್ಷಕರಾದ ಕೃಷ್ಣ ಕಾರ್ಯಕ್ರಮ ನಿರೂಪಿಸಿ, ಮುಖ್ಯ ಶಿಕ್ಷಕರಾದ ರಾಜು ಎಚ್.ಆರ್. ವಂದಿಸಿದರು.