ಪೊನ್ನಂಪೇಟೆ, ಫೆ. ೩: ಕೊಡವ ದೀನ ಬಂಧು ಚಾರಿಟೇಬಲ್ ಟ್ರಸ್ಟ್, ಮೈಸೂರು ಇವರ ವತಿಯಿಂದ ಗೋಣಿಕೊಪ್ಪಲು ಕಾವೇರಿ ಪದವಿ ಕಾಲೇಜು ಹಾಗೂ ಕಾವೇರಿ ಪದವಿ ಪೂರ್ವ ಕಾಲೇಜಿನ ೧೦೯ ವಿದ್ಯಾರ್ಥಿಗಳು, ಲಯನ್ಸ್ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳು ಹಾಗೂ ಕಾವೇರಿ ಪಾಲಿಟೆಕ್ನಿಕ್ ಕಾಲೇಜಿನ ಒಬ್ಬ ವಿದ್ಯಾರ್ಥಿ ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ಒಟ್ಟು ೧೧೩ ಕೊಡವ ಜನಾಂಗದವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಪದವಿ ವಿದ್ಯಾರ್ಥಿಗಳಿಗೆ ತಲಾ ರೂ. ೮೦೦೦, ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ತಲಾ ರೂ. ೫೦೦೦ ರಂತೆ ಒಟ್ಟು ೧೧೩ ವಿದ್ಯಾರ್ಥಿಗಳಿಗೆ ಸುಮಾರು ರೂ. ೭,೭೦,೦೦೦ ಮೊತ್ತವನ್ನು ವಿತರಿಸಲಾಯಿತು. ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಕೊಡವ ದೀನ ಬಂಧು ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಕಟ್ಟೆರ ಕಾರ್ಯಪ್ಪ ಅವರು ಮಾತನಾಡಿ ಕೊಡವ ದೀನ ಬಂಧು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಡವ ಜನಾಂಗದಲ್ಲಿ ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಅಪ್ಪ, ಅಮ್ಮ ಇಲ್ಲದ ವಿದ್ಯಾರ್ಥಿಗಳಿಗೆ, ಒಬ್ಬರೇ ಪೋಷಕರು ಇರುವ ವಿದ್ಯಾರ್ಥಿಗಳಿಗೆ, ಅನಾರೋಗ್ಯ ಪೀಡಿತ ಪೋಷಕರ ಮಕ್ಕಳಿಗೆ, ಅಂಗವೈಕಲ್ಯ ಇರುವ ವಿದ್ಯಾರ್ಥಿಗಳಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ಕೊಡವ ವಿದ್ಯಾರ್ಥಿಗಳಿಗೆ ಅವರ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿವರ್ಷ ವಿದ್ಯಾರ್ಥಿವೇತನ ನೀಡುತ್ತಾ ಬರುತ್ತಿದ್ದು, ಕೊಡವ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಟ್ರಸ್ಟ್ನ ಗೌರವ ಕಾರ್ಯದರ್ಶಿ ಪಟ್ಟಡ ಜಯಕುಮಾರ್ ಅವರು ಮಾತನಾಡಿ ಆರ್ಥಿಕವಾಗಿ ಹಿಂದುಳಿದ ಕೊಡವ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಟ್ರಸ್ಟ್ ನ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಧನ ಸಹಾಯ ಮಾಡಲಾಗುತ್ತಿದೆ. ಈ ಹಣವನ್ನು ತಮ್ಮ ಓದಿಗೆ ಪೂರಕವಾಗಿ ಉಪಯೋಗಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೋಣಿಕೊಪ್ಪಲು ಕಾವೇರಿ ಕಾಲೇಜು ಪ್ರಾಂಶುಪಾಲ ಡಾ. ಮಾಳೇಟಿರ ಬಿ. ಕಾವೇರಿಯಪ್ಪ ಮಾತನಾಡಿ ಕೊಡವ ದೀನ ಬಂಧು ಚಾರಿಟೇಬಲ್ ಟ್ರಸ್ಟ್ನಿಂದ ನೀಡುವ ವಿದ್ಯಾರ್ಥಿ ವೇತನ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲಿದೆ. ಈ ಟ್ರಸ್ಟ್ನಿಂದ ಸಹಾಯ ಪಡೆದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸಿ ತಾವು ಉದ್ಯೋಗಕ್ಕೆ ಸೇರಿದ ನಂತರ ಟ್ರಸ್ಟ್ಗೆ ಧನ ಸಹಾಯ ಮಾಡಿದರೆ, ಮತ್ತಷ್ಟು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕಾವೇರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಣ್ಣುವಂಡ ಎಸ್. ಮಾದಯ್ಯ, ಕೊಡವ ದೀನ ಬಂಧು ಚಾರಿಟೇಬಲ್ ಟ್ರಸ್ಟ್ನ ಖಜಾಂಚಿ ನಿವೃತ್ತ ವಿಂಗ್ ಕಮಾಂಡರ್ ಚೇಂದ್ರಿಮಾಡ ಜಿ.ಮಾದಪ್ಪ, ಟ್ರಸ್ಟಿಗಳಾದ ಚಂಬಾAಡ ಸೋಮಣ್ಣ, ಕಳ್ಳಿಚಂಡ ಮುದ್ದುರಾಜು, ಉಪನ್ಯಾಸಕರಾದ ಕುಸುಮ್, ವಿಪ್ರ ನೀಲಮ್ಮ, ಆಡಳಿತಾತ್ಮಕ ಸಿಬ್ಬಂದಿ ಯಮುನ ಇನ್ನಿತರರು ಹಾಜರಿದ್ದರು. ಕೊಡವ ದೀನ ಬಂಧು ಚಾರಿಟೇಬಲ್ ಟ್ರಸ್ಟ್ ನ ವಿದ್ಯಾರ್ಥಿವೇತನ ಹಾಗೂ ಇನ್ನಿತರ ಮಾಹಿತಿಗಾಗಿ ಪಟ್ಟಡ ಜಯಕುಮಾರ್ ಮೊ.ಸಂ. ೯೪೮೦೬೬೫೫೨೫ಕ್ಕೆ ಸಂಪರ್ಕಿಸಬಹುದು.