ಪೊನ್ನಂಪೇಟೆ, ಫೆ. ೨: ಜಿಲ್ಲೆಯ ಗಡಿಭಾಗವಾದ ಕುಟ್ಟ ಇಂದು ಹೊಸ ಇತಿಹಾಸವೊಂದಕ್ಕೆ ಸಾಕ್ಷಿಯಾಯಿತು. ನೂರಾರು ವಾಹನಗಳು, ಕೊಡವ ಸಾಂಪ್ರದಾಯಿಕ ಧಿರಿಸಿನಲ್ಲಿ ಸಾವಿರಾರು ಪುರುಷರು, ಮಹಿಳೆಯರ ಕಲರವ... ಸಂಚಲನ ಮೂಡಿಸಿದಂತಿತ್ತು.

ಬಹುಶಃ ಕೊಡಗಿನ ಇತಿಹಾಸದಲ್ಲಿ ಇತ್ತೀಚಿನ ಹಲವು ವರ್ಷಗಳ ಬಳಿಕ ಇದೇ ಪ್ರಥಮ ಬಾರಿಗೆ ಎಂಬAತೆ ಕೊಡವ ಜನಾಂಗದವರು, ಕೊಡವ ಭಾಷಿಕ ಸಮುದಾಯದವರು ಒಂದಾಗಿ ಬೆರೆತು ಕೊಡವಾಮೆಯ, ಕೊಡವ ಸಂಸ್ಕೃತಿಯ ಉಳಿವು - ಅಸ್ತಿತ್ವದ ವಿಚಾರವನ್ನು ಮುಂದಿರಿಸಿ ಹಮ್ಮಿಕೊಂಡಿರುವ ಕೊಡವಾಮೆ ಬಾಳೋ ಎಂಬ ಹೆಸರಿನ ಪಾದಯಾತ್ರೆ ಕುಟ್ಟದಿಂದ ಆರಂಭಗೊAಡಿತು.

ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಈ ಪಾದಯಾತ್ರೆಯನ್ನು ಕುಟ್ಟದಿಂದ ಪ್ರಾರಂಭಿಸಿ ಜಿಲ್ಲಾ ಕೇಂದ್ರ ಮಡಿಕೇರಿಯತನಕ ೬ ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದು, ನಿರೀಕ್ಷೆಗೂ ಮೀರಿ ಭಾಗವಹಿಸಿದ್ದ ಅಪಾರ ಜನಸ್ತೋಮದ ಸಾಮೂಹಿಕ ಪಾಲ್ಗೊಳ್ಳುವಿಕೆಯ ಮೂಲಕ ಪ್ರಾರಂಭಿಸಲಾಯಿತು. ಕುಟ್ಟ ಸುತ್ತಮುತ್ತಲಿನ ವ್ಯಾಪ್ತಿಯ ಗ್ರಾಮಗಳ ಜನತೆ ಮಾತ್ರವಲ್ಲ ಜಿಲ್ಲೆಯ ಮೂಲೆ ಮೂಲೆಗಳಿಂದ ಜನರು ಕುಟ್ಟದತ್ತ ಆಗಮಿಸಿದ್ದರು. ವಿವಿಧ ಕುಟುಂಬಗಳು, ಕೊಡವ ಸಮಾಜಗಳು, ಕೊಡವಭಾಷಿಕ ಸಮುದಾಯದವರು, ಹಲವು ಸಂಘ - ಸಂಸ್ಥೆಗಳವರು ಅಮಿತೋತ್ಸಾಹದೊಂದಿಗೆ ಕುಟ್ಟದಿಂದ ಹೆಜ್ಜೆ ಹಾಕಲಾರಂಭಿಸಿದ್ದಾರೆ.

ಬೃಹತ್ ಪಾದಯಾತ್ರೆ ಆರಂಭಿಕ ದಿನ ಟಿ. ಶೆಟ್ಟಿಗೇರಿತನಕ ಸುಮಾರು ೧೭ ಕಿ.ಮೀ. ಜರುಗಿದ್ದು, ಮಾರ್ಗದ ನಡುವೆ ಕಾಫಿ ತಿಂಡಿ, ಪಾನೀಯ, ಊಟದ ವ್ಯವಸ್ಥೆ, ಅಲ್ಲಲ್ಲಿ ಸ್ವಾಗತದ ಮೂಲಕ ಜರುಗಿತು. ಟಿ. ಶೆಟ್ಟಿಗೇರಿಯಲ್ಲಿ ಅಲ್ಲಿನ ಕೊಡವ ಸಮಾಜದ ಸ್ವಾಗತ - ಮೆರವಣಿಗೆಯೊಂದಿಗೆ ಅಲ್ಲಿನ ಕೊಡವ ಸಮಾಜದಲ್ಲಿ ಪ್ರಥಮ ದಿನದ ಯಾತ್ರೆ ಸಮಾಪನೆಗೊಂಡಿತು. ಕೊಡವ ಜನಾಂಗದವರು ಹಾಗೂ ಕೊಡವ ಭಾಷಿಕ ಜನಾಂಗದವರು ಒಂದೇ ವೇದಿಕೆಯಡಿ ಸೇರುವ ಮೂಲಕ ಈ ಪಾದಯಾತ್ರೆ ಇನ್ನೂ ಐದು ದಿನಗಳ ಕಾಲ ಮುಂದುವರಿಯಲಿದೆ.

ಕೊಡವ ಹಾಗೂ ಕೊಡವ ಭಾಷಿಕ ಸಮುದಾಯಗಳ ಸಂಸ್ಕೃತಿ ಆಚಾರ- ವಿಚಾರಗಳ ಮೇಲೆ ಆಗುತ್ತಿರುವ ದಬ್ಬಾಳಿಕೆ, ಸಮುದಾಯದ ಕಡೆಗಣನೆ, ಸಂಸ್ಕೃತಿ ಹಾಗೂ ಹಕ್ಕಿನ ಭದ್ರತೆ, ಪದ್ಧತಿ, ಪರಂಪರೆಯ ಉಳಿವು, ಜನಾಂಗದ ಅಸ್ತಿತ್ವ ಕಾಪಾಡುವ ನಿಟ್ಟಿನಲ್ಲಿ ಸರ್ಕಾರಗಳ ಗಮನ ಸೆಳೆಯುವ ಉದ್ದೇಶದಿಂದ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ತಾ. ೭ ರ ವರೆಗೆ ಕುಟ್ಟದಿಂದ ಮಡಿಕೇರಿಯವರೆಗೆ ಹಮ್ಮಿಕೊಳ್ಳಲಾಗಿರುವ ಕೊಡವಾಮೆ ಬಾಳೋ ಪಾದಯಾತ್ರೆಗೆ ಕುಟ್ಟ ಬಸ್ ನಿಲ್ದಾಣದಿಂದ ಪ್ರಾರಂಭಗೊAಡಿತು. ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅವರು ಕುಟ್ಟ ಕರ್‌ಂಗಾಳಿ (ಕುಟ್ಟತಮ್ಮೆ) ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಪಾದಯಾತ್ರೆಯ ನೇತೃತ್ವ ವಹಿಸಿ ದೇವರನ್ನು ಪ್ರಾರ್ಥಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.ಗಡಿನಾಡು ಕುಟ್ಟದಿಂದ ಪ್ರಾರಂಭವಾದ ಪಾದಯಾತ್ರೆಗೆ ಕೊಡಗಿನ ಎಲ್ಲೆಡೆಗಳಿಂದ ಸಾಂಪ್ರದಾಯಿಕ ಉಡುಪಿನಲ್ಲಿ

೩ಏಳನೇ ಪುಟಕ್ಕೆ (ಮೊದಲ ಪುಟದಿಂದ) ಸಹಸ್ರಾರು ಸಂಖ್ಯೆಯಲ್ಲಿ ಕೊಡವ ಹಾಗೂ ಕೊಡವ ಭಾಷಿಕ ಜನಾಂಗದ ಪುರಷರು, ಮಹಿಳೆಯರು, ಮಕ್ಕಳು ಸೇರಿದಂತೆ ಜನಸಾಗರವೇ ಹರಿದುಬಂದಿತು. ಕುಟ್ಟದಿಂದ ಟಿ. ಶೆಟ್ಟಿಗೇರಿವರೆಗೆ ಸುಡು ಬಿಸಿಲನ್ನೂ

ಲೆಕ್ಕಿಸದೇ ಮಕ್ಕಳು, ಪುರುಷರು, ಮಹಿಳೆಯರು, ಹಿರಿಯ ನಾಗರಿಕರು ಉತ್ಸಾಹದಿಂದ ಪಾಲ್ಗೊಂಡರು. ಪಾದಯಾತ್ರೆಗೆ ನಿರೀಕ್ಷೆಗೂ ಮೀರಿದ ಜನಸಾಗರ ಸೇರಿ ವ್ಯಾಪಕ ಬೆಂಬಲ ವ್ಯಕ್ತವಾಯಿತು. ರಸ್ತೆಯಲ್ಲಿ ಸುಮಾರು ೨.೫ ಕಿ.ಮೀ. ಉದ್ದದವರೆಗೂ ಕೊಡವ, ಕೊಡವ ಭಾಷಿಕ ಜನಾಂಗದವರ ಶಿಸ್ತುಬದ್ಧ ಸಾಲುಗಳು ಕಂಡು ಬಂದವು. ಪಾದಯಾತ್ರೆಯ ಮುಂಚೂಣಿಯಲ್ಲಿದ್ದ ವಾಹನ ಸುತ್ತ ಅಳವಡಿಸಲಾಗಿದ್ದ ಕೊಡವ ವಾರಿಯರ್ಸ್ ಚಿತ್ರಗಳು ಗಮನಸೆಳೆದವು. ಪಾದಯಾತ್ರೆಗೂ ಮೊದಲು ಜಿಲ್ಲೆಯ ಹಲವೆಡೆಗಳಿಂದ ತಮ್ಮ ತಮ್ಮ ವಾಹನಗಳಲ್ಲಿ ಬಂದ ಕೊಡವ ಹಾಗೂ ಕೊಡವ ಭಾಷಿಕ ಜನಾಂಗದವರು ತಮ್ಮ ವಾಹನಗಳನ್ನು ಟಿ ಶೆಟ್ಟಿಗೇರಿಯಲ್ಲಿ ನಿಲ್ಲಿಸಿ, ಬಸ್ಸುಗಳಲ್ಲಿ ಕುಟ್ಟಕ್ಕೆ ತೆರಳಿದರು. ಅಲ್ಲಿಂದ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ದೂರದೂರಿಂದ ಬಂದವರು ಬಸ್ಸಿನಲ್ಲಿಯೇ ಕುಟ್ಟತಲುಪಿ ಪಾದಯಾತ್ರೆಯಲ್ಲಿ ಪಾಲ್ಗೊಂಡರು.

ಪಾದಯಾತ್ರೆಯಲ್ಲಿ ಎಲ್ಲಿಯೂ ಭಾಷಣ, ಘೋಷಣೆ ಇರಲಿಲ್ಲ. ಬಿತ್ತಿಫಲಕಗಳನ್ನು ಹಿಡಿದುಕೊಂಡು ತೆರಳುವ ಮೂಲಕ ಪಾದಯಾತ್ರೆ ಶಾಂತಿಯುತವಾಗಿ ನಡೆಯಿತು. ದಾರಿಯುದ್ದಕ್ಕೂ ಪಾದಯಾತ್ರಿಗಳಿಗೆ ತೊಂದರೆಯಾಗದAತೆ ಮೊಬೈಲ್ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರು, ಆಂಬುಲೆನ್ಸ್ ಸೇವೆ ಒದಗಿಸಲಾಗಿತ್ತು. ಪಾದಯಾತ್ರಿಗಳಿಗೆ ಮಂಚಳ್ಳಿಯಲ್ಲಿ ತಂಪುಪಾನೀಯ ಹಾಗೂ ಫಲಾಹಾರ ವ್ಯವಸ್ಥೆಮಾಡ ಲಾಗಿತ್ತು. ಮಧ್ಯಾಹ್ನ ಕುಮಟೂರು ಕಾಕೂರು ಜೆ ಸಿ ಶಾಲೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಶ್ರೀಮಂಗಲ ಕೊಡವ ಸಮಾಜ ವತಿಯಿಂದ ಪಾದಯಾತ್ರಿಗಳಿಗೆ ಸ್ವಾಗತ ಕೋರಿ ತಂಪು ಪಾನೀಯ ನೀಡಲಾಯಿತು.

ಟಿ. ಶೆಟ್ಟಿಗೇರಿ ತಲುಪಿದ ಕೂಡಲೇ ಟಿ ಶೆಟ್ಟಿಗೇರಿ ಕೊಡವ ಸಮಾಜದ ವತಿಯಿಂದ ಸ್ವಾಗತಕೋರುವ ಮೂಲಕ ಬರಮಾಡಿಕೊಂಡು, ಕಾಫಿ, ತಿಂಡಿ ವ್ಯವಸ್ಥೆ ಮಾಡುವುದರೊಂದಿಗೆ ಮೊದಲ ದಿನದ ಪಾದಯಾತ್ರೆಯನ್ನು ಮುಕ್ತಾಯಗೊಳಿಸಲಾಯಿತು. ಟಿ. ಶೆಟ್ಟಿಗೇರಿಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡ ಪ್ರಮುಖರು ಸೇರಿದಂತೆ ಹಲವರು ತಂಗಲಿದ್ದು, ತಾ. ೩ ರಂದು ಯಾತ್ರೆ ಮುಂದುವರೆಸಲಿದ್ದಾರೆ.

ಗಮನ ಸೆಳೆದ ಬಿತ್ತಿಫಲಕಗಳು

ಕೊಡವಾಮೆಯ ಗತ್ತು, ವಿಶ್ವಕ್ಕೆ ಗೊತ್ತು. ಪೊಮ್ಮಾಲೆ ಕೊಡಗೆಂದೂ ನಮ್ಮಯ ಸೊತ್ತು. ಇತರರ ಹಕ್ಕನ್ನು ಕೇಳೆವು ನಾವು, ನಮ್ಮಯ ಅಧಿಕಾರ, ಬಿಡೇವು ನಾವು. ಕೋಳಿ ಕೇಳಿ ಸಂಬಾರ ಅರೆಯೊಲ್ಲ, ಯಾರಿಗೂ ಬೆದರಿ ಸಂಪ್ರದಾಯ ಬಿಡೊಲ್ಲ. ನಾವು ಹುಟ್ಟಿದ್ದು ಇಲ್ಲೇ, ನಾವು ಬೆಳೆದಿದ್ದು ಇಲ್ಲೇ, ನಾವು ಬಾಳುವುದು ಇಲ್ಲೇ, ನಾವು ಕೊಡವ ಇರುವುದೂ ಇಲ್ಲೇ.. ಕೊಡವರ ಸಂವಿಧಾನ ಬದ್ಧ ಹಕ್ಕುಗಳ ಬೇಡಿಕೆಗೆ ನಿರಂತರ ಅಡ್ಡಗಾಲು. ನಮ್ಮ ಸಂವಿಧಾನ ಹಕ್ಕು ನಮಗೆ ದಕ್ಕಲಿ. ಕೊಡವಾಮೆ ಬಾಳೊಂಡು ದೇಶೋದ್ಧಾರಕ್.. ಕೊಡವ ಇಲ್ಲತ ಕೋವಿಲ್ಲೆ.. ಕೊಡವಾಮೆ ಇಲ್ಲತೆ ಕೊಡಗ್ ಇಲ್ಲೆ.. ಇನ್ನೂ ಮುಂತಾದ ಬರಹಗಳು ಗಮನ ಸೆಳೆದವು.

ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಮಾಜಿ ಎಂಎಲ್‌ಸಿ ಚೆಪ್ಪುಡಿರ ಅರುಣ್ ಮಾಚಯ್ಯ, ವಿವಿಧ ಕೊಡವ ಸಮಾಜಗಳು ವಿವಿಧ, ಕೊಡವ ಸಂಘ ಸಂಸ್ಥೆಗಳು, ವಿವಿಧ ಕೊಡವ ಸಂಘಟನೆಗಳು, ವಿವಿಧ ಕೊಡವ ಭಾಷಿಕ ಜನಾಂಗದ ಸಮಾಜಗಳು, ವಿವಿಧ ಕೊಡವ ಭಾಷಿಕ ಜನಾಂಗದ ಸಂಘ ಸಂಸ್ಥೆಗಳು, ಸಂಘಟನೆಗಳು, ವಿವಿಧ ಊರು ತಕ್ಕರು ಪಾಲ್ಗೊಂ ಡಿದ್ದರು. -ವರದಿ : ಚನ್ನನಾಯಕ