ಜಗತ್ತಿನ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮ ಮಹಾ ಕುಂಭಮೇಳಕ್ಕೆ ಪ್ರಯಾಗ್ ರಾಜ್ ಸಾಕ್ಷಿಯಾಗಿದೆ. ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದ್ದು ೪೫ ದಿನಗಳ ಕಾಲ ೪೫ ಕೋಟಿ ಭಕ್ತರ ನಿರೀಕ್ಷೆಯಲ್ಲಿದೆ ಮಹಾ ಕುಂಭಮೇಳ. ಖರ್ಚಿಗಿಂತ ಮೂರು ಪಟ್ಟು ಆದಾಯ ಬರಲಿರುವ ಈ ಮಹಾಕುಂಭಮೇಳಕ್ಕೆ ಅಲ್ಲಿನ ಸರಕಾರ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿದೆ. ಸಾಧು ಸಂತರು, ಅಘೋರಿಗಳು, ನಾಗ ಸಾಧುಗಳು ತಂಡೋಪ ತಂಡವಾಗಿ ಪುಣ್ಯ ಸ್ನಾನ ಮಾಡಲು ಬರುತ್ತಿದ್ದಾರೆ. ಗಂಗಾ ಯಮುನಾ ನದಿಗಳ ಸಂಗಮವಾದ ಸ್ಥಳ ಗುಪ್ತಗಾಮಿನಿ ಸರಸ್ವತಿ ನದಿಗಳು ಸಂಗಮಿಸುತ್ತಾಳೆ ಎಂಬ ಪ್ರತಿತಿಯು ಕೂಡ ಇದೆ. ಆ ಸ್ಥಳದಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ. ಈ ಬಾರಿಯ ಮಹಾಕುಂಭಮೇಳಕ್ಕೆ ವಿಶೇಷವಾಗಿದ್ದು ೧೪೪ ವರ್ಷಕೊಮ್ಮೆ ನಡೆಯುವ ಕುಂಭಮೇಳ ಆಗಿರುವುದರಿಂದ ಈ ವಿಶೇಷವಾದ ವ್ಯವಸ್ಥೆಯನ್ನು ಸರಕಾರ ಮಾಡುತ್ತಿದೆ. ೧೦೦೦೦ ಎಕರೆ ಪ್ರದೇಶದಲ್ಲಿ ನಡೆಯುವ ಈ ಕಾರ್ಯಕ್ರಮ ನಿಜವಾಗಿ ದೇಶದ ಇತಿಹಾಸದಲ್ಲಿ ಹೊಸದಾದ ಮೈಲುಗಲ್ಲು.

ಕುಂಭಮೇಳದಲ್ಲಿ ಅರ್ಧ ಕುಂಭಮೇಳ ,ಪೂರ್ಣ ಕುಂಭಮೇಳ, ಮಹಾ ಕುಂಭಮೇಳ ಎಂದೆಲ್ಲ ಕರೆಯುತ್ತಾರೆ. ನಾಲ್ಕು ವರ್ಷಕ್ಕೊಂದು, ಆರು ವರ್ಷಕ್ಕೊಂದು, ೧೨ ವರ್ಷಕ್ಕೊಂದು ನಡೆಯುತ್ತದೆ. ೧೪೪ ವರ್ಷಕ್ಕೊಂದು ನಡೆಯುವ ಕುಂಭಮೇಳಕ್ಕೆ ಮಹಾಕುಂಭ ಮೇಳ ಎಂದು ಕರೆಯುತ್ತಾರೆ. ಈಗ ನಡೆಯುತ್ತಿರುವ ಕುಂಭಮೇಳ ೧೪೪ ವರ್ಷಕೊಮ್ಮೆ ನಡೆಯುವ ಮಹಾಕುಂಭಮೇಳವಾಗಿದ್ದು ನಮ್ಮ ಕಾಲಘಟ್ಟದಲ್ಲಿ ನಡೆಯುತ್ತಿರುವುದು ನಮಗೆ ಹೆಮ್ಮೆಯ ವಿಚಾರವೇ ಸರಿ. ಈ ಬಾರಿ ವಿಶೇಷವಾದ ಧಾರ್ಮಿಕ ಕಾರ್ಯಕ್ರಮ ನಡೆಯುವುದರಿಂದ ಅಚ್ಚುಕಟ್ಟಿನ ವ್ಯವಸ್ಥೆಗೆ ಸರಕಾರ ವ್ಯವಸ್ಥೆ ಮಾಡುತ್ತಿದೆ. ದೊಡ್ಡ ಮಟ್ಟದ ಪ್ರಚಾರ ಸಿಗುತ್ತಿದೆ. ಇಡೀ ಜಗತ್ತು ಈ ಮಹಾಕುಂಭ ಮೇಳದ ಕಾರ್ಯಕ್ರಮವನ್ನು ವಿಶೇಷವಾಗಿ ಗಮನಿಸುತ್ತಿದೆ.

ಕುಂಭಮೇಳದ ಹಿನ್ನೆಲೆ ಏನು ಎಂದು ತಿಳಿಯಬೇಕೆಂದರೆ ಅಸುರರು ಹಾಗೂ ದೇವತೆಗಳ ನಡುವೆ ಸಮುದ್ರ ಮಂಥನ ನಡೆಯುವ ಸಂದರ್ಭ ಅಮೃತ ಸಿಗುತ್ತದೆ. ಕೆಲವು ಅಮೃತದ ಹನಿಗಳು ಭೂಮಿಗೆ ಬೀಳುತ್ತದೆ. ಅ ಕಾರಣಕ್ಕಾಗಿ ಪ್ರಯಾಗ್, ಹರಿದ್ವಾರ, ನಾಸಿಕ್, ಉಜ್ಯೆನಿ, ಭಾಗದಲ್ಲಿ ಪುಣ್ಯಸ್ನಾನವನ್ನು ಮಾಡಿದರೆ ನಮಗೆ ಪುಣ್ಯ ಸಿಗುತ್ತದೆ ಎಂಬ ನಂಬಿಕೆ.

ಆ ಕಾರಣಕ್ಕಾಗಿ ಆ ಸ್ಥಳಗಳಲ್ಲಿ ಕುಂಭಮೇಳಗಳು ನಡೆಯುತ್ತದೆ. ಆ ಸಂದರ್ಭದಲ್ಲಿ ಗಮನ ಸೆಳೆಯುವವರು ನಾಗಸಾಧುಗಳು ನಿಗೂಢವಾಗಿ ಕಾಣುತ್ತಾರೆ. ವಿಚಿತ್ರ ವಿಚಿತ್ರವಾಗಿ ಕಾಣಸಿಗುವ ನಾಗಸಾಧುಗಳು ತಂಡೋಪ ತಂಡವಾಗಿ ಕಾಣ ಸಿಗುತ್ತಾರೆ. ಜನವಸತಿ ಪ್ರದೇಶದಲ್ಲಿ ಇವರನ್ನು ಕಾಣುವುದು ತೀರ ವಿರಳ. ಹೀಗಾಗಿ ಸಹಜವಾಗಿ ಇವರನ್ನು ಕುತೂಹಲದಿಂದ ನೋಡುತ್ತಾರೆ. ಕುಂಭಮೇಳ ಮುಗಿದ ನಂತರ ದಿಢೀರ್ ಆಗಿ ಮಾಯವಾದಂತೆ ಇವರ ಸುಳಿವೇ ಇರುವುದಿಲ್ಲ. ಕುಂಭಮೇಳದ ಸಂದರ್ಭ ದಿಢೀರ್ ಆಗಿ ಪ್ರತ್ಯಕ್ಷ ಆಗುವ ಇವರು ಎಲ್ಲಿರುತ್ತಾರೆ? ಹೇಗಿರುತ್ತಾರೆ? ಏನು ಮಾಡುತ್ತಾರೆ? ಯಾರಿವರು? ಅವರ ವೇಷಭೂಷಣವನ್ನು ಗಮನಿಸಿದಾಗ ಕೆಲವು ಸಾಧುಗಳು ಉದ್ದವಾದ ಜಡೆಯನ್ನು ಬಿಟ್ಟಿರುತ್ತಾರೆ. ಕೆಲಸಾಧುಗಳು ಉದ್ದವಾದ ಉಗುರನ್ನು ಬಿಟ್ಟಿರುತ್ತಾರೆ. ಕೆಲವರು ಒಂಟಿ ಕಾಲಿನಲ್ಲಿ ನಡೆಯುತ್ತಾರೆ. ಕೆಲಸಾಧುಗಳು ಒಂದು ಕೈಯನ್ನು ಅನೇಕ ವರ್ಷದಿಂದ ಮೇಲೆತ್ತಿ ಘೋರ ತಪಸ್ಸಿನಲ್ಲಿ ತಲ್ಲಿನರಾಗಿರುತ್ತಾರೆ. ವಿಶಿಷ್ಟವಾದ ಆಚರಣೆ ವ್ರತದಿಂದ ಕೂಡಿರುವ ನಾಗ ಸಾಧುಗಳು ಒಂದಷ್ಟು ಮಂದಿ ಸಂಪೂರ್ಣ ನಗ್ನರಾಗಿರುತ್ತಾರೆ. ಕೆಲವು ನಾಗ ಸಾಧುಗಳು ತುಂಡು ಬಟ್ಟೆಯನ್ನು ತೊಟ್ಟಿರುತ್ತಾರೆ. ಕೆಲವರ ಕೈಯಲ್ಲಿ ತ್ರಿಶೂಲ ಇರುತ್ತದೆ. ಕೆಲವರು ಖಡ್ಗವನ್ನು, ದಂಡವನ್ನು ಹಿಡಿದಿರುತ್ತಾರೆ. ಯಾವುದಾದರೂ ಒಂದು ಆಯುಧಗಳು ಅವರ ಬಳಿ ಇದ್ದೇ ಇರುತ್ತದೆ. ಕೆಲವು ನಾಗ ಸಾಧುಗಳು ರೌದ್ರ ರೂಪದಲ್ಲಿ ಕಾಣುತ್ತಾರೆ. ಕೆಲವರು ಶಾಂತ ಸ್ವಭಾವದಿಂದ ಕೂಡಿರುತ್ತಾರೆ. ಕುಂಭಮೇಳದಲ್ಲಿ ಇವರಿಗೆ ವಿಶೇಷವಾದ ಅವಕಾಶವನ್ನು ಮಾಡಿ ಕೊಡಲಾಗುತ್ತದೆ. ಮೊದಲ ಪವಿತ್ರ ಸ್ನಾನ ಮಾಡುವವರು ಈ ನಾಗ ಸಾಧುಗಳು ಆಗಿರುತ್ತಾರೆ. ಅದಾದ ಬಳಿಕವೇ ಉಳಿದವರಿಗೆ ಪುಣ್ಯ ಸ್ನಾನ ಮಾಡಲು ಅವಕಾಶವಿದೆ.

ನಾಗಸಾಧುಗಳಲ್ಲಿ ಪುರುಷರು ಮಾತ್ರವಲ್ಲದೆ ಕೆಲ ಮಹಿಳೆಯರು ಕೂಡ ಇರುತ್ತಾರೆ. ಇವರನ್ನು ಸಾದ್ವಿಗಳೆಂದು ಕರೆಯುತ್ತಾರೆ. ಅನೇಕ ನಾಗ ಸಾಧುಗಳು ಹೆಚ್ಚು ವಿದ್ಯಾಭ್ಯಾಸ ಪಡೆದವರು ಕೂಡ ಇರುತ್ತಾರೆ. ಕೆಲ ನಾಗ ಸಾಧುಗಳು ಶ್ರೀಮಂತ ಕುಟುಂಬದಿAದ ಬಂದವರು ದೀಕ್ಷೆ ಪಡೆದು ನಾಗ ಸಾಧುಗಳಾಗಿ ಮಾರ್ಪಾಡು ಹೊಂದಿರುತ್ತಾರೆ.

ಎಂಟನೇ ಶತಮಾನದಲ್ಲಿ ಶಂಕರಾಚಾರ್ಯರ ಆ ಕಾಲದಲ್ಲಿ ಹಿಂದೂ ಸಮಾಜಕ್ಕೆ ಸನಾತನ ಸಂಸ್ಕೃತಿಗೆ ಸಮಸ್ಯೆಯಾದಾಗ ಸೈನ್ಯವನ್ನು ನಾಗಸಾಧುಗಳ ಮೂಲಕ ತಯಾರು ಮಾಡಲಾಯಿತು ಎಂಬ ಉಲ್ಲೇಖವು ಇದೆ.

ಶಂಕರಾಚಾರ್ಯರು ನಾಲ್ಕು ದಿಕ್ಕುಗಳಿಗೆ ನಾಲ್ಕು ಶಿಷ್ಯರನ್ನು ಕಳಿಸಿ ಕೊಟ್ಟಿರುತ್ತಾರೆ .ಈ ರೀತಿ ಹೋದಂತಹ ಶಿಷ್ಯರುಗಳು ತಮ್ಮದೇ ಆದ ತಂಡವನ್ನು ಕಟ್ಟಿಕೊಳ್ಳುತ್ತಾರೆ ನಾಗಸಾಧುಗಳಿಗೆ ಶಾಸ್ತçವು ಗೊತ್ತಿರಬೇಕು. ಶಸ್ತçವು ಗೊತ್ತಿರಬೇಕು. ಅಧ್ಯಾತ್ಮಿಕ ಲೋಕದ ಪರಿಚಯವೋ ಗೊತ್ತಿರಬೇಕು. ಎಂಟನೇ ಶತಮಾನದಲ್ಲಿ ನಾಗಸಾಧುಗಳ ಬಗ್ಗೆ ಬೇರೆ ಬೇರೆ ರೀತಿಯ ಉಲ್ಲೇಖಗಳು ಇವೆ.

ನಾಗಸಾಧುಗಳ ಬದುಕು ವಿಭಿನ್ನವಾದದ್ದು, ದೇಹದ ಮೇಲೆ ಸಂಪೂರ್ಣವಾಗಿ ಆಸೆ ಮೋಹವನ್ನು ಬಿಟ್ಟಿರುತ್ತಾರೆ. ಆಸ್ತಿ ಮಾಡುವುದಾಗಲಿ, ಮದುವೆಯಾಗುವುದಾಗಲಿ ಎಲ್ಲವನ್ನು ತ್ಯಜಿಸಿ ಬ್ರಹ್ಮಚಾರಿಯಾಗಿ ಕಠಿಣ ವ್ರತವನ್ನು ಪಾಲನೆ ಮಾಡುತ್ತಾರೆ. ದೇಹದ ಮೇಲೆ ಯಾವುದೇ ಸಣ್ಣ ಆಸೆಯನ್ನು ಕೂಡ ಹೊಂದಿಲ್ಲದ ಇವರು ಆ ಕಾರಣಕ್ಕಾಗಿ ಇವರು ಬಟ್ಟೆಯನ್ನು ಧರಿಸದೆ ನಗ್ನವಾಗಿರುವುದನ್ನು ನಾವುಗಳು ಕಾಣುತ್ತೇವೆ. ಕೆಲವೊಂದು ನಾಗಸಾಧುಗಳು ಮಾತ್ರ ಜನವಸತಿ ಪ್ರದೇಶಕ್ಕೆ ಬಂದಾಗ ತುಂಡು ಬಟ್ಟೆಯನ್ನು ತೊಡುತ್ತಾರೆ.

ನಾಗಸಾಧುವಾಗಿ ಪರಿವರ್ತನೆಯಾಗಲು ಕಠಿಣ ವ್ರತ ದೀಕ್ಷೆಯನ್ನು ಪಡೆಯಲು ಗುರುವಿನ ಬಳಿ ಹೋಗುತ್ತಾರೆ. ಗುರುಗಳು ಅಪ್ಪಣೆ ಕೊಟ್ಟರೆ ಮಾತ್ರ ದೀಕ್ಷೆ ಪಡೆಯಲು ಸಾಧ್ಯ. ಕಾಮ, ಮೋಹಕ್ಕೆ ಬಲಿಯಾಗದೆ ತನ್ನ ವ್ರತ್ತವನ್ನು ಮಾಡಬೇಕಾಗುತ್ತದೆ. ಕುಟುಂಬದಿAದ ದೂರ ಉಳಿದು ಬ್ರಹ್ಮಚಾರಿಯಾಗಿ ಹಂತ ಹಂತವಾಗಿ ಗುರುಗಳು ನೀಡಿದ ಎಲ್ಲಾ ಪಾಲನೆಯನ್ನು ಕಡ್ಡಾಯವಾಗಿ ಮಾಡಬೇಕಾಗುತ್ತದೆ. ಬೆಳಿಗ್ಗೆ ಏಳುವುದು, ಮಲಗುವುದು ಸೇರಿದಂತೆ ದೇಹವನ್ನು ದಂಡಿಸುವ ಎಲ್ಲ ಕ್ರಮವನ್ನು ಗುರುಗಳು ಹೇಳಿಕೊಡುತ್ತಾರೆ.

ಹಂತ ಹಂತವಾಗಿ ವ್ರತ ಪಾಲನೆ ಮಾಡಿ ಸುಮಾರು ೬ ರಿಂದ ೧೫ ವರ್ಷ ಕೂಡ ತೆಗೆದುಕೊಳ್ಳುತ್ತದೆ. ಈ ಎಲ್ಲಾ ಪಾಲನೆಗಳನ್ನು ಮುಗಿಸಿದ ನಂತರವೇ ಕುಂಭಮೇಳದಲ್ಲಿ ಸಾಧುಗಳು ಪಾಲ್ಗೊಳ್ಳುತ್ತಾರೆ. ಯಾವುದೇ ಹೆಣ್ಣನ್ನು ಕಾಮದ ದೃಷ್ಟಿಯಲ್ಲಿ ನೋಡಬಾರದು, ಹೆಣ್ಣಿನ ಸಹವಾಸ ಮಾಡಬಾರದು, ಹೆಣ್ಣನ್ನು ಗೌರವದಿಂದ ನೋಡಬೇಕು ಎನ್ನುವ ಕಾರಣಕ್ಕಾಗಿ ವೀರ್ಯನಾಡಿಯನ್ನೇ ಮುಚ್ಚಿಸುವಂತಹ ಕಠಿಣವಾದ ಕ್ರಮವನ್ನು ಮಾಡಿಸಿಕೊಳ್ಳುತ್ತಾರೆ. ಘೋರವಾದ ತಪಸ್ಸು, ದೀಕ್ಷೆಗಾಗಿ ವಾರಕ್ಕೊಮ್ಮೆ ಊಟ ಮಾಡುವ ಸಾಧುಗಳು ತಮ್ಮ ಜೀವ ಉಳಿಸಲು ಮಾತ್ರ ಮಿತವಾದ ಪದಾರ್ಥವನ್ನು ಬಳಸುತ್ತಾರೆ. ಕೆಲವೊಂದು ಸಾಧುಗಳು ಹಿಮಾಲಯ ತಪ್ಪಲಿನಲ್ಲಿ ಅನೇಕ ವರ್ಷಗಳ ಕಾಲ ತಪಸ್ಸನ್ನು ಮಾಡುವುದರಲ್ಲೆ ಕಾಲ ಕಳೆಯುತ್ತಾರೆ. ಲೋಕ ಕಲ್ಯಾಣವೇ ಇವರ ಉದ್ದೇಶ. ಇವರ ಬದುಕು ವಿಸ್ಮಯ ನಿಗೂಢವಾಗಿದೆ.

ಏನೇ ಆಗಲಿ ಜಗತ್ತಿನ ಅತಿದೊಡ್ಡ ಧಾರ್ಮಿಕ ಮಹಾಕುಂಭಮೇಳ ಭಾರತದ ಸಂಸ್ಕೃತಿ ಪದ್ಧತಿ ಪರಂಪರೆಯನ್ನು ಭಾರತದ ಘನತೆ ಗೌರವವನ್ನು ಹೆಚ್ಚಿಸಿದೆ. ೧೪೪ ವರ್ಷಗಳ ನಂತರ ನಡೆಯುತ್ತಿರುವ ಈ ಬಾರಿಯ ಮಹಾಕುಂಭಮೇಳ ನಮ್ಮ ಕಾಲಘಟ್ಟದಲ್ಲಿ ನಡೆಯುತ್ತಿರುವುದು ನಮಗೆಲ್ಲರಿಗೂ ಸಂತೋಷದ ಮತ್ತು ಹೆಮ್ಮೆಯ ವಿಚಾರವೇ ಸರಿ. ಭಾರತ ವಿಶ್ವಗುರು ಆಗುವ ಸನಿಹದಲ್ಲಿರುವ ಇ ಸಮಯದಲ್ಲಿ ಕುಂಭಮೇಳವನ್ನು ಇಡೀ ಜಗತ್ತು ವಿಶೇಷವಾಗಿ ಗಮನಿಸುತ್ತಿದೆ.

ಪಿ.ಎಂ. ರವಿ, ಮಡಿಕೇರಿ, ದೂ: ೯೯೭೨೦೭೩೨೯೫