(ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಜ. ೨೭: ಕ್ರೀಡೆಯ ತವರು ಕೊಡಗು ಜಿಲ್ಲೆಯಲ್ಲಿ ಹಾಕಿ, ಫುಟ್ಬಾಲ್ ಸೇರಿದಂತೆ ಅನೇಕ ಕ್ರೀಡೆಗಳು ಏಪ್ರಿಲ್ ತಿಂಗಳಲ್ಲಿ ನಡೆಯಲಿದ್ದು, ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿಯೂ ಪ್ರತಿಷ್ಠಿತ ಚೆಲ್ಸಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ೧೧ನೇ ವರ್ಷದ ಕೂರ್ಗ್ ಚಾಂಪಿಯನ್ ಲೀಗ್, ಕಾಲ್ಚೆಂಡು ಪಂದ್ಯಾವಳಿಗೆ ಏಪ್ರಿಲ್ ೧೭ರಂದು ಚಾಲನೆ ದೊರೆಯಲಿದೆ. ೪ ದಿನಗಳ ಕಾಲ ನಡೆಯುವ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟವು ವಿಶ್ವಕಪ್ ಮಾದರಿಯಲ್ಲಿ ನಡೆಯಲಿದ್ದು, ಪ್ರತಿಷ್ಠಿತ ೧೬ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.
ಆಟಗಾರರನ್ನು ಬಿಡ್ಡಿಂಗ್ ಮೂಲಕ ಆಯ್ಕೆ ಮಾಡಲಾಗಿದ್ದು, ಸೂಪರ್ ೭ ಕಾಲ್ಚೆಂಡು ಕ್ರೀಡಾಕೂಟಕ್ಕೆ ಹೊಸ ಆವಿಷ್ಕಾರವನ್ನು ತರಲಾಗಿದೆ. ವರ್ಷಂಪ್ರತಿ ಪ್ರತಿಷ್ಠಿತ ಚೆಲ್ಸಿ ಸ್ಪೋರ್ಟ್ಸ್ ಕ್ಲಬ್ ವಿಶೇಷ ರೀತಿಯಲ್ಲಿ ಕಾಲ್ಚೆಂಡು ಪಂದ್ಯಾವಳಿ ಯನ್ನು ಆಯೋಜಿಸುತ್ತಿದ್ದು, ಈ ಬಾರಿಯೂ ವಿಭಿನ್ನ ರೀತಿಯಲ್ಲಿ ಪಂದ್ಯಾವಳಿ ಯನ್ನು ಆಯೋಜಿಸುವ ನಿರ್ಧಾರ ಕೈಗೊಂಡಿದೆ. ಹೊನಲು ಬೆಳಕಿನಲ್ಲಿ ಏಪ್ರಿಲ್ ೧೭ರಿಂದ ೨೦ರವರೆಗೆ ಪಂದ್ಯಾವಳಿಯು ಗೋಣಿಕೊಪ್ಪಲುವಿನ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜರುಗಲಿದೆ. ಚೆಲ್ಸಿ ಸ್ಪೋರ್ಟ್ಸ್ ಕ್ಲಬ್‌ನ ಈ ಬಾರಿಯ ಅಧ್ಯಕ್ಷರಾಗಿ ಗೋಣಿಕೊಪ್ಪ ಗ್ರಾ.ಪಂ. ಪಿಡಿಓ ತಿಮ್ಮಯ್ಯ ಆಯ್ಕೆಗೊಂಡಿದ್ದಾರೆ. ಗೌರವ ಅಧ್ಯಕ್ಷರಾಗಿ ಮಿಸಸ್ ಇಂಡಿಯಾ ಖ್ಯಾತಿಯ ಕಾವ್ಯ ಸಂಜು, ಉಪಾಧ್ಯಕ್ಷರಾಗಿ ಚೆಲ್ಸಿ ಸ್ಪೋರ್ಟ್ಸ್ ಕ್ಲಬ್‌ನ ಕುಮಾರ್, ಕಾರ್ಯದರ್ಶಿಯಾಗಿ ಹರೀಶ್ ನೇಮಕಗೊಂಡಿದ್ದಾರೆ. ಉಳಿದಂತೆ ಆರೋಗ್ಯ ಮಾರ್ಗದರ್ಶಕರಾಗಿ ಡಾ. ಬೆಳ್ಳಿಯಪ್ಪ, ಕಾನೂನು ಸಲಹೆಗಾರರಾಗಿ ಅಪ್ಪಣ್ಣ, ಮಾಧ್ಯಮ ಸಲಹೆಗಾರರಾಗಿ ಹೆಚ್.ಕೆ. ಜಗದೀಶ್ ಅವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಚೆಲ್ಸಿ ಸ್ಪೋರ್ಟ್ಸ್ ಕ್ಲಬ್‌ನ ಪ್ರೀಮಿಯರ್ ಎಕ್ಸಿಕ್ಯೂಟಿವ್ ಸದಸ್ಯರುಗಳಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಾದ ಕುಲ್ಲಚಂಡ ಪ್ರಮೋದ್ ಗಣಪತಿ, ಸಮಾಜ ಸೇವಕರಾದ ಮಂಜುರೈ, ಮೀನು ಉಂಬಯಿ, ರಶೀದ್, ಜಯಲಕ್ಷಿö್ಮ ಜ್ಯುವೆಲ್ಲರಿ ಮಾಲೀಕರಾದ ನಾಗೇಶ್, ಸ್ಯಾಕ್ ಆಕಾಡೆಮಿ ಮುಖ್ಯಸ್ಥರಾದ ಮೈನಾ ನಾಯರ್, ಡಾ. ಸಾನೀಯಾ, ಮಿಲನ್ಸ್ ಕ್ಲಬ್ ಮುಖ್ಯಸ್ಥರಾದ ಲಿಜೇಶ್, ಆರ್. ಉಮೇಶ್, ಅಜ್ಮಿ ವ್ಯವಸ್ಥಾಪಕ ಜಯನ್ ನೇಮಕಗೊಂಡಿದ್ದಾರೆ.
ಚೆಲ್ಸಿ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷರಾದ ತಿಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗೋಣಿಕೊಪ್ಪಲುವಿನ ಖ್ಯಾತ ವೈದ್ಯರಾದ ಡಾ. ಬೆಳ್ಳಿಯಪ್ಪ ಮಾತನಾಡಿ, ಕೊಡಗು ಜಿಲ್ಲೆಯು ಕ್ರೀಡೆಗೆ ತನ್ನದೆ ಆದ ಕೊಡುಗೆಯನ್ನು ನೀಡಿದೆ. ವರ್ಷಂಪ್ರತಿ ವಿಭಿನ್ನ ರೀತಿಯಲ್ಲಿ ಕಾಲ್ಚೆಂಡು ಪಂದ್ಯಾವಳಿಯನ್ನು ಆಯೋಜಿಸುತ್ತಿರುವುದು ಕ್ರೀಡಾಭಿಮಾನಿಗಳಿಗೆ ಹೊಸ ಹುರುಪನ್ನು ತರುತ್ತಿದೆ. ಹೊನಲು ಬೆಳಕಿನಲ್ಲಿ ಕಾಲ್ಚೆಂಡು ಪಂದ್ಯಾವಳಿ ಆಯೋಜಿಸಿರುವುದರಿಂದ ಸಂಜೆಯ ವೇಳೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಯಿದೆ. ಯಾವುದೇ ರೀತಿಯ ತೊಂದರೆ ಎದುರಾಗದಂತೆ ಪಂದ್ಯಾಟವನ್ನು ಯಶಸ್ವಿಗೊಳಿಸಲು ಆಯೋಜಕರು ವಿಶೇಷ ಆಸಕ್ತಿ ವಹಿಸಲು ಮನವಿ ಮಾಡಿದರು.
ಮತ್ತೋರ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಪ್ರಮೋದ್ ಗಣಪತಿ ಮಾತನಾಡಿ, ಕ್ರೀಡೆಯ ಮೂಲಕ ಜನರನ್ನು ಒಂದೆಡೆ ಸೇರಿಸಬಹುದು. ಪ್ರತಿಭೆಗಳಿಗೆ ಅವಕಾಶವೂ ದೊರೆಯಲಿದೆ. ಪಂದ್ಯಾಟಕ್ಕೆ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಸಾಮಾಜಿಕ ಕ್ಷೇತ್ರಕ್ಕೆ ಪಂದ್ಯಾವಳಿಯ ನೆನಪಿನಲ್ಲಿ ಕೊಡುಗೆ ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ಕಾವ್ಯ ಸಂಜು, ಚೆಲ್ಸಿ ಸ್ಪೋರ್ಟ್ಸ್ ಕ್ಲಬ್ ಉಪಾಧ್ಯಕ್ಷರಾದ ಕುಮಾರ್, ಡಾ. ಸಾನಿಯಾ, ತಮ್ಮ ಅಭಿಪ್ರಾಯವನ್ನು ಹಂಚಿಕೊAಡರು. ಕಾರ್ಯಕ್ರಮದ ಅಂಗವಾಗಿ ಗಣ್ಯರಿಗೆ ವಿಶೇಷ ರೀತಿಯಲ್ಲಿ ನೆನಪಿನ ಕಾಣಿಕೆಯನ್ನು ಚೆಲ್ಸಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನೀಡಲಾಯಿತು.