ಸೋಮವಾರಪೇಟೆ, ಜ. ೨೭: ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ೧೨೭ನೇ ಜನ್ಮ ದಿನಾಚರಣೆಯನ್ನು ಸಮೀಪದ ಯಡೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ. ಮಲ್ಲಪ್ಪ ಮಾತನಾಡಿ, ದೇಶ ಕಂಡ ಅಪ್ರತಿಮ ವ್ಯಕ್ತಿ ಸುಭಾಷ್ ಚಂದ್ರ ಬೋಸ್ ಅವರು ಇಂದಿಗೂ ಯುವಜನರ ಪ್ರೇರಣೆಯಾಗಿದ್ದು, ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಿಕೊಂಡು ಹೋದಲ್ಲಿ ಸುಖಿ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕುಮಾರಸ್ವಾಮಿ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಗೌರವ ಅಧ್ಯಕ್ಷ ಹಾಲೇ ಬೇಲೂರು ನಿರ್ವಾಣಿ ಶೆಟ್ಟಿ, ಉಪಾಧ್ಯಕ್ಷ ಕುಟ್ಟಪ್ಪ, ಹಿರಿಯ ಸಲಹೆಗಾರ ವೀರಪ್ಪ, ನಿರ್ದೇಶಕ ಮಾಚಯ್ಯ, ಮುಖ್ಯೋಪಾಧ್ಯಾಯರಾದ ಪ್ರೇಮ, ಸಂಘದ ನಿರ್ದೇಶಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕರು ಭಾಗವಹಿಸಿದ್ದರು.
ವಿದ್ಯಾರ್ಥಿಗಳಿಗೆ ನೇತಾಜಿ ಬಗ್ಗೆ ಭಾಷಣ, ಚಿತ್ರಕಲೆ, ಭಾವಗೀತೆ, ನೃತ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.