ಕೂಡಿಗೆ, ಜ. ೨೭: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ ಅಧ್ಯಕ್ಷ ಭಾಸ್ಕರ್ ನಾಯಕ್ ಅಧ್ಯಕ್ಷತೆಯಲ್ಲಿ ಜರುಗಿತು.

ಸಭೆಯಲ್ಲಿ ಹಾಜರಿದ್ದ ಕೂಡ್ಲೂರು ವಾರ್ಡ್ನ ಸದಸ್ಯ ಕೆ.ಕೆ. ಭೋಗಪ್ಪ ಮಾತನಾಡಿ, ಕೂಡ್ಲೂರು ಕೈಗಾರಿಕಾ ಘಟಕದ ಕೇಂದ್ರದಲ್ಲಿ ನಿರ್ಮಿಸಲಾಗುತ್ತಿರುವ ಗ್ಯಾಸ್ ಘಟಕದ ಕೇಂದ್ರದವರು ಗ್ರಾಮ ಪಂಚಾಯಿತಿ ವತಿಯಿಂದ ಯಾವುದೇ ಕಟ್ಟಡ ಪರವಾನಗಿ ಹಾಗೂ ಘಟಕ ಆರಂಭಿಸುವ ಬಗ್ಗೆ ದೃಢೀಕರಣ ಪತ್ರವನ್ನು ಪಡೆಯದೆ ಖಾಸಗಿ ಗ್ಯಾಸ್ ಘಟಕ ಆರಂಭ ಮಾಡುವ ಕಾರ್ಯ ನಡೆಯುತ್ತಿದೆ. ಅದಕ್ಕೆ ಸಂಬAಧಿಸಿದAತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ಥಳ ಪರಿಶೀಲನೆ ನಡೆಸಿ ಪಂಚಾಯಿತಿಗೆ ಮೂಲ ತೆರಿಗೆ ಬರುವಂತೆ ಮಾಡಲು ಕಾರ್ಯನಿರ್ವಹಿಸುವಂತೆ ಆಗ್ರಹಿಸಿದರು.

ಪ್ರಮುಖವಾಗಿ ಗ್ಯಾಸ್ ಘಟಕದ ಕೇಂದ್ರದಲ್ಲಿ ಗ್ಯಾಸ್ ಸೋರಿಕೆಯಿಂದ ಈಗಾಗಲೇ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸನೆ ಬರುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಹಾಜರಿದ್ದ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸದಸ್ಯರು ಸ್ಥಳ ಪರಿಶೀಲನೆಗೆ ತೆರಳುವಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಮುಂದಿನ ದಿನಗಳಲ್ಲಿ ಬೇಸಿಗೆ ಕಾಲವು ಸಮೀಪಿಸುತ್ತಿರುವ ಹಿನ್ನೆಲೆ ಕುಡಿಯುವ ನೀರಿನ ವ್ಯವಸ್ಥೆಗೆ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಚರ್ಚೆಗಳು ನಡೆದವು.

ಅಧ್ಯಕ್ಷತೆ ವಹಿಸಿದ್ದ ಭಾಸ್ಕರ್ ನಾಯಕ್ ಮಾತನಾಡಿ, ಸದಸ್ಯರುಗಳ ಅಭಿಪ್ರಾಯಗಳನ್ನು ನಿಯಮಾನುಸಾರ ತೆಗೆದುಕೊಂಡು ಕಾರ್ಯಗತಗೊಳಿಸಲಾಗುವುದು. ಅಲ್ಲದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ಅಂಗಡಿ ಮಾಲೀಕರು ತಮ್ಮ ಅಂಗಡಿಯ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ. ೬೦ ರಷ್ಟು ಕನ್ನಡ ಪದಗಳನ್ನು ಬಳಸುವಂತೆ ಸೂಚನೆ ಮತ್ತು ಜಾರಿಗೆ ತರುವ ಕಾರ್ಯಕ್ಕೆ ಮುಂದಾಗುತ್ತೇವೆ ಎಂದು ಸಭೆಯಲ್ಲಿ ತಿಳಿಸಿದರು. ಈ ಸಂದರ್ಭ ಅಭಿವೃದ್ಧಿ ಅಧಿಕಾರಿ ಸಂತೋಷ್ ಸರಕಾರದ ಹೊಸ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯ ವಿವಿಧ ವಾರ್ಡ್ನ ಸದಸ್ಯರು ಹಾಜರಿದ್ದರು. ಸಂತೋಷ್ ಸ್ವಾಗತಿಸಿ, ವಂದಿಸಿದರು.