*ಸಿದ್ದಾಪುರ ಜ. ೧೦: ಕಾರ್ಮಾಡು ಪಂಚಾಯಿತಿ ವ್ಯಾಪ್ತಿಯ ಅಮ್ಮತ್ತಿ ಉಪಠಾಣೆಯ ಬಳಿ ಇರುವ ಸಾರ್ವಜನಿಕ ಬಾವಿಗೆ ಖಾಸಗಿ ವ್ಯಕ್ತಿಯೊಬ್ಬರು ಮೋಟಾರ್ ಅಳವಡಿಸಿದ್ದು, ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಪಂಚಾಯಿತಿ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಾರ್ವಜನಿಕ ಬಾವಿಗೆ ಅನುಮತಿ ಇಲ್ಲದೆ ಮೋಟಾರ್ ಅಳವಡಿಸಿರುವ ವ್ಯಕ್ತಿ ವಾಹನಗಳನ್ನು ತೊಳೆಯುವುದಕ್ಕೂ ಈ ನೀರನ್ನು ಬಳಸುತ್ತಿದ್ದಾರೆ. ಇದರಿಂದ ಬಾವಿಯ ನೀರಿನ ಮಟ್ಟ ಇಳಿಕೆಯಾಗಿದೆ ಎಂದು ಸುತ್ತಮುತ್ತಲಿನ ನಿವಾಸಿಗಳು ಆರೋಪಿಸಿದ್ದಾರೆ. ತಕ್ಷಣ ಗ್ರಾ.ಪಂ. ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.