ಸೋಮವಾರಪೇಟೆ, ಜ. ೧೦: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿ ಜನಾಕರ್ಷಣೆ ಪಡೆಯುತ್ತಿರುವ ಮಲ್ಲಳ್ಳಿ ಜಲಪಾತದಲ್ಲಿ ಕೇಬಲ್ ಕಾರ್ ಯೋಜನೆ ಅನುಷ್ಠಾನದ ಬಗ್ಗೆ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹೇಳಿದ್ದಾರೆ.

ಈ ಹಿಂದೆ ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಅವರನ್ನು ಭೇಟಿ ಮಾಡಿ ಕ್ಷೇತ್ರಕ್ಕೆ ಯಾವುದಾದರೂ ಯೋಜನೆ ಒದಗಿಸಬೇಕೆಂದು ಮನವಿ ಮಾಡಿದ ಸಂದರ್ಭ ಮಲ್ಲಳ್ಳಿ ಜಲಪಾತಕ್ಕೆ ಕೇಬಲ್ ಕಾರ್ ಯೋಜನೆ ರೂಪಿಸುವ ಬಗ್ಗೆ ಪ್ರಸ್ತಾವಿಸಲಾಗಿತ್ತು ಎಂದು ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

ಮಲ್ಲಳ್ಳಿಯಲ್ಲಿ ಕೇಬಲ್ ಕಾರ್ ಅಳವಡಿಸುವ ಪ್ರಸ್ತಾವನೆ ಈ ಹಿಂದಿನಿAದಲೂ ಇತ್ತು. ಇದೀಗ ಪ್ರವಾಸೋದ್ಯಮ ಇಲಾಖೆ ಪಟ್ಟಿ ಬಿಡುಗಡೆ ಮಾಡಿದ್ದು, ಮಲ್ಲಳ್ಳಿ ಜಲಪಾತದಲ್ಲಿ ಕೇಬಲ್ ಕಾರ್ ಯೋಜನೆ ಅನುಷ್ಠಾನಕ್ಕೆ ಚಿಂತಿಸಲಾಗಿದೆ. ಇದನ್ನು ಸರ್ಕಾರದ ವತಿಯಿಂದ ಮಾಡುವುದೋ ಅಥವಾ ಖಾಸಗಿಯಾಗಿ ಮಾಡುವುದೋ ಎಂಬ ಬಗ್ಗೆ ಇನ್ನಷ್ಟೇ ತೀರ್ಮಾನವಾಗಬೇಕಿದೆ ಎಂದರು.

ಸರ್ಕಾರ ಅಥವಾ ಖಾಸಗಿಯಾಗಿಯೂ ಈ ಯೋಜನೆಯನ್ನು ಅನುಷ್ಠಾನಗೊಳಿಸಬಹುದು. ಅಂದಾಜು ೧೦೦ ಕೋಟಿಯ ಯೋಜನೆ ಇದಾಗಬಹುದು. ಸಾರ್ವಜನಿಕವಾಗಿ ಆಸಕ್ತಿ ತೋರಿಸಿದರೆ ಉದ್ದೇಶಿತ ಯೋಜನೆಯ ಜಾಗವನ್ನು ಸಂಬAಧಿಸಿದ ಸಂಸ್ಥೆಗೆ ಕೆಲವೊಂದು ಷರತ್ತುಗಳನ್ನು ವಿಧಿಸಿ ಒಪ್ಪಂದ ಮಾಡಿಕೊಡಬೇಕು. ಸಾರ್ವಜನಿಕ ಆಸಕ್ತಿ ಕರೆಯಬೇಕು. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ಕಮಿನಷನರ್ ಅವರು ಕ್ರಮ ವಹಿಸುತ್ತಾರೆ ಎಂದು ಶಾಸಕರು ತಿಳಿಸಿದರು.

ಶಾಂತಳ್ಳಿ ಹೋಬಳಿಯ ಬೆಟ್ಟದಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿಯೂ ಸಿ ಮತ್ತು ಡಿ ಜಾಗದ ಸಮಸ್ಯೆ ಇದೆ. ಅದಕ್ಕೂ ಈ ಯೋಜನೆಗೂ ಸಂಬAಧ ಕಲ್ಪಿಸಬಾರದು. ಸಿ ಮತ್ತು ಡಿ ಜಾಗ ಸಮಸ್ಯೆ ಬಗೆಹರಿಸಲು ಈಗಾಗಲೇ ಜವಾಬ್ದಾರಿ ತೆಗೆದುಕೊಂಡಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಶಾಸಕರು ಉತ್ತರಿಸಿದರು. ಸುತ್ತಮುತ್ತಲ ಗ್ರಾಮೀಣ ಭಾಗದಿಂದ ಯುವ ಜನಾಂಗ ಗ್ರಾಮ ತೊರೆದು ಪಟ್ಟಣದಲ್ಲಿ ನೆಲೆಸಿದೆ. ಇಂತಹ ಯೋಜನೆಯಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುತ್ತದೆ. ವ್ಯಾಪಾರ ವಹಿವಾಟು, ಪ್ರವಾಸೋದ್ಯಮ ಬೆಳವಣಿಗೆಯಾಗುತ್ತದೆ. ಯುವ ಜನಾಂಗ ವಾಪಸ್ ಬರಲೂ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಿಸಿದರು.

ಮೊದಲಿಗೆ ಯೋಜನೆಯ ನೀಲನಕ್ಷೆ ತಯಾರಾಗಬೇಕು. ತದನಂತರ ಸ್ಥಳೀಯ ಗ್ರಾಮ ಪಂಚಾಯಿತಿ, ಜಿಲ್ಲಾಧಿಕಾರಿಗಳು, ಕ್ಯಾಬಿನೆಟ್ ಒಪ್ಪಿಗೆ ಪಡೆಯಬೇಕು. ಪ್ರಮುಖವಾಗಿ ಅರಣ್ಯ ಇಲಾಖೆಯ ನಿರಾಕ್ಷೇಪಣೆ ಅಗತ್ಯವಾಗಿದೆ.

ಕಾನೂನು ಭಾಗದಲ್ಲಿಯೇ ಪ್ರಕ್ರಿಯೆಗಳು ಸಾಗಬೇಕು. ಆದಷ್ಟು ಬೇಗ ಪ್ರಕ್ರಿಯೆ ಆರಂಭಿಸುವAತೆ ಸಚಿವರಿಗೆ ಮನವಿ ಮಾಡಲಾಗುವುದು. ಬೃಹತ್ ಯೋಜನೆಯಾಗಿರುವ ಕೇಬಲ್ ಕಾರ್, ಮಲ್ಲಳ್ಳಿಯಲ್ಲಿ ಅನುಷ್ಠಾನಗೊಂಡರೆ ಕೊಡಗಿನಲ್ಲಿಯೇ ದೊಡ್ಡ ಪ್ರವಾಸಿ ತಾಣವಾಗುತ್ತದೆ ಎಂದು ಶಾಸಕ ಮಂತರ್ ಗೌಡ ಹೇಳಿದರು.