ಮಡಿಕೇರಿ, ಜ. ೯: ಮಾರ್ಚ್ನಲ್ಲಿ ಮಡಿಕೇರಿಯಲ್ಲಿ ಕೊಡವ ಕುಟುಂಬಗಳ ನಡುವೆ ನಡೆಯಲಿರುವ ಮುದ್ದಂಡ ಕಪ್ ಹಾಕಿ ಉತ್ಸವದ ಲಾಂಛನ ಬಿಡುಗಡೆ ಸಮಾರಂಭ ತಾ. ೧೧ ರಂದು (ನಾಳೆ) ನಡೆಯಲಿದೆ ಎಂದು ಉತ್ಸವದ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಗರದ ಕಾವೇರಿ ಹಾಲ್‌ನಲ್ಲಿ ಬೆಳಿಗ್ಗೆ ೧೧ ಗಂಟೆಗೆ ನಡೆಯುವ ಸಮಾರಂಭದಲ್ಲಿ ಅತಿಥಿಗಳಾಗಿ ಸಂಸದ ಯದುವೀರ್ ಒಡೆಯರ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಡಾ. ಮಂತರ್‌ಗೌಡ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಮಾಜಿ ಸಚಿವ ಅಪ್ಪಚ್ಚು ರಂಜನ್, ಮಾಜಿ ಎಂಎಲ್‌ಸಿಗಳಾದ ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡAಡ ಬೋಪಣ್ಣ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದರು.

ಕೊಡವ ಕೌಟುಂಬಿಕ ಹಾಕಿ ಈ ಬಾರಿ ಬೆಳ್ಳಿಮಹೋತ್ಸವ ಸಂಭ್ರಮದಲ್ಲಿದ್ದು, ಈ ಪ್ರಯುಕ್ತ ಮಹಿಳಾ ತಂಡಗಳ ನಡುವೆಯೂ ಹಾಕಿ ಪಂದ್ಯಾಟ ಏರ್ಪಡಿಸ ಲಾಗುತ್ತಿದ್ದು, ೫೦ ರಿಂದ ೧೦೦ ಮಹಿಳಾ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ. ತಾ. ೧೨ ರಿಂದ ತಂಡಗಳ ನೋಂದಣಿ ಕಾರ್ಯ ಆರಂಭವಾಗಲಿದೆ. ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಹಾಗೂ ಪೊಲೀಸ್ ಕವಾಯತು ಮೈದಾನದಲ್ಲಿ ಪಂದ್ಯಾಟಗಳು ನಡೆಯಲಿವೆ. ಮಾ. ೨೮ ರಿಂದ ಏ. ೨೭ರವರೆಗೆ ಹಾಕಿ ಉತ್ಸವ ನಡೆಯಲಿದೆ.

ಬೆಳ್ಳಿ ಹಬ್ಬದ ಸಂಭ್ರಮಕ್ಕಾಗಿ ಹಾಕಿ ಪಂದ್ಯಾಟದೊAದಿಗೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗುತ್ತಿದ್ದು, ಈ ಬಾರಿಯ ಹಾಕಿ ಉತ್ಸವಕ್ಕೆ ೨ ರಿಂದ ೨.೫೦ ಕೋಟಿಯಷ್ಟು ವೆಚ್ಚವಾಗಲಿದೆ ಎಂದು ರಶಿನ್ ಸುಬ್ಬಯ್ಯ ಮಾಹಿತಿಯಿತ್ತರು.

ಹಾಕಿ ಉತ್ಸವದ ಕಾರ್ಯದರ್ಶಿ ಮುದ್ದಂಡ ರಂಜಿತ್ ಪೊನ್ನಪ್ಪ ಮಾತನಾಡಿ, ಈ ಬಾರಿ ೪೦೦ಕ್ಕೂ ಅಧಿಕ ಕೊಡವ ಕುಟುಂಬ ತಂಡಗಳು ಹಾಕಿ ಉತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು. ಕೊಡವ ಹಾಕಿ ಅಕಾಡೆಮಿ ಉಪಾಧ್ಯಕ್ಷ ಕುಕ್ಕೆರ ಜಯ ಚಿಣ್ಣಪ್ಪ ಮಾತನಾಡಿ, ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕೆ ಅಕಾಡೆಮಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಮುದ್ದಂಡ ಹಾಕಿ ಉತ್ಸವದ ಗೌರವಾಧ್ಯಕ್ಷ ಮುದ್ದಂಡ ಬಿ. ದೇವಯ್ಯ ಮಾತನಾಡಿ, ಈ ಬಾರಿ ಉತ್ಸವದಲ್ಲಿ ಶೂಟಿಂಗ್ ಸ್ಪರ್ಧೆಯನ್ನು ಏರ್ಪಡಿಸ ಲಾಗುತ್ತಿದೆ. ಲಾಂಛನ ಅನಾವರಣದ ಬಳಿಕ ಜಿಲ್ಲೆಯ ಶಾಸಕರುಗಳ ಮೂಲಕ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಹಾಕಿ ಉತ್ಸವಕ್ಕೆ ೧.೫೦ ಕೋಟಿ ಅನುದಾನಕ್ಕೆ ಮನವಿ ಮಾಡುವುದಾಗಿ ಹೇಳಿದರು.

ಗೋಷ್ಠಿಯಲ್ಲಿ ಮುದ್ದಂಡ ಹಾಕಿ ಉತ್ಸವದ ಉಪಾಧ್ಯಕ್ಷ ಮುದ್ದಂಡ ಡೀನ್ ಬೋಪಣ್ಣ, ಸದಸ್ಯ ಮುದ್ದಂಡ ಟಿ. ಬೆಳ್ಳಿಯಪ್ಪ ಉಪಸ್ಥಿತರಿದ್ದರು.