ಕೂಡಿಗೆ, ಜ. ೮: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಅರೆಭಾಷೆ ಗೌಡ ಸಂಘದ ವಾರ್ಷಿಕೋತ್ಸವ ಮತ್ತು ಹುತ್ತರಿ ಹಬ್ಬದ ಸಂತೋಷ ಕೂಟವು ಸಂಘದ ಅಧ್ಯಕ್ಷ ಮತ್ತಾರಿ ಮುದ್ದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸೈನಿಕ ದೇವಜನ ಚಿಣ್ಣಪ್ಪ ನೆರವೇರಿಸಿದರು. ನಂತರ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳು ನಡೆಯುವುದರಿಂದ ಜನಾಂಗದ ಆಚಾರ, ವಿಚಾರ, ಕಲೆ ಮತ್ತು ಸಂಸ್ಕೃತಿಯ ಬೆಳವಣಿಗೆಯಾಗುತ್ತದೆ. ಯುವ ಪೀಳಿಗೆಗೆ ಇಂತಹ ಕಾರ್ಯಕ್ರಮಗಳು ಮಾದರಿಯಾಗುತ್ತಿವೆ. ಗ್ರಾಮಾಂತರ ಪ್ರದೇಶಗಳಲ್ಲಿಯೂ ಸಮುದಾಯದವರು ಒಂದೆಡೆ ಸೇರಲು, ಸಂಘದ ಬೆಳವಣಿಗೆಗೆ ಚರ್ಚಿಸಲು ಸಹಕಾರವಾಗುವುದು ಎಂದರು. ಮುಖ್ಯ ಅತಿಥಿ ಸಂಘದ ಸ್ಥಾಪಕ ಅಧ್ಯಕ್ಷ ಚೆರಿಯಮನೆ ಮಾದಪ್ಪ ಮಾತನಾಡಿ, ಸಮುದಾಯದ ಮುಖೇನ ಇಂತಹ ಕಾರ್ಯಕ್ರಮಗಳು ನಡೆಯುವುದರಿಂದ ಸಂಘಟನೆಗೆ ಪೂರಕವಾದ ಯೋಜನೆಯನ್ನು ಕೈಗೊಳ್ಳಲು ಅನುಕೂಲವಾಗುತ್ತದೆ. ಜೊತೆಯಲ್ಲಿ ನಶಿಸಿ ಹೋಗುತ್ತಿರುವ ಸಮುದಾಯದ ಕಲೆ ಮತ್ತು ಕ್ರೀಡೆಗಳ ಬೆಳವಣಿಗೆಗೆೆ ಒತ್ತು ನೀಡಲು ಸಹಕಾರವಾಗುವುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ವಾರ್ಷಿಕೋತ್ಸವದ ಅಂಗವಾಗಿ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮವು ದೊಡ್ಡೇರ ಲಲಿತಾ ಅವರ ಕಾಫಿ ಕಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪೊಕ್ಕುಳಂಡ್ರ ಸುಂದರ, ಉಳಿಯಡ್ಕ ಜಗದೀಶ್, ಕರ್ಣಯ್ಯನ ಬಸಪ್ಪ, ಕರುಂಬಿ ಶಿವಪ್ಪ, ಮತ್ತಾರಿ ಹರ್ಷ, ಚೆರಿಯಮನೆ ಶಿಲಾ, ಮತ್ತಾರಿ ಲತಾ, ಪೊಕ್ಕುಳಂಡ್ರ ತುಳಸಿ, ಹುಲಿಮನೆ ವಸಂತ, ನಡುವಟ್ಟಿರ ಶಿವಪ್ರಕಾಶ್, ಸುಳ್ಳಕೋಡಿ ವಿಳಂಕುಮಾರ್, ಸೇರಿದಂತೆ ಇತರರು ಭಾಗವಹಿಸಿದ್ದರು.