ಶ್ರೀಮಂಗಲ, ಜ. ೮: ಪೊನ್ನಂಪೇಟೆ ಭೂದಾಖಲೆಗಳ ಮತ್ತು ಭೂಮಾಪನ ಕಚೇರಿಯಲ್ಲಿ ಭೂಮಾಪನ ಮಾಡಲು ಸಾರ್ವಜನಿಕರ ಕಡತ ಪಡೆದು ನಂತರ ಕಡತದೊಂದಿಗೆ ಒಂದು ತಿಂಗಳಿನಿAದ ನಾಪತ್ತೆಯಾಗಿರುವ ಭೂಮಾಪಕರ ವಿರುದ್ಧ ಸಾರ್ವಜನಿಕರು ದೂರು ಸಲ್ಲಿಸಿದ್ದಾರೆ.

ಪೊನ್ನಂಪೇಟೆ ಭೂಮಾಪನ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ಭೂ ಮಾಪಕ ಕಿರಣ್ ಹೆಚ್. ಸಿ. ಅವರಿಗೆ ನಿಯಮಾನುಸಾರ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ನಿರ್ದೇಶನದಂತೆ ಕಡತ ಸಹಿತ ಜಾಗಗಳ ಭೂಮಾಪನಕ್ಕೆ ನೀಡಲಾಗಿತ್ತು. ಹಲವು ಸ್ಥಳಗಳಿಗೆ ಭೂಮಾಪನ ಮಾಡಿ, ಇನ್ನೂ ಕೆಲವು ಸ್ಥಳಕ್ಕೆ ತೆರಳದೇ ಸರ್ಕಾರಿ ಭೂಮಾಪಕ ಕಿರಣ್ ಹೆಚ್. ಸಿ. ಅವರು ಕಚೇರಿಗೆ ವರದಿ ಸಲ್ಲಿಸದೆ ನಕಾಶೆಗಳನ್ನು ನೀಡದೆ ಹಾಗೂ ಕಡತಗಳನ್ನು ನೀಡದೆ ಒಂದು ತಿಂಗಳಿನಿAದ ನಾಪತ್ತೆಯಾಗಿದ್ದು, ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ.ಇದರಿಂದ ದಿನ ನಿತ್ಯ ಕಚೇರಿಗೆ ಅಲೆದು ಸಾಕಾಗಿರುವ ಹಲವಾರು ಸಾರ್ವಜನಿಕರು ಭೂಮಾಪಕನ ವಿರುದ್ಧ ಲಿಖಿತ ದೂರು ಸಲ್ಲಿಸಿದ್ದಾರೆ.

ಲಿಖಿತ ದೂರನ್ನು ಭೂದಾಖಲೆಗಳು ಹಾಗೂ ಭೂಮಾಪನ ಇಲಾಖೆಯ ಜಂಟಿ ನಿರ್ದೇಶಕರು ಮೈಸೂರು, ಭೂ ದಾಖಲೆಗಳ ಉಪನಿರ್ದೇಶಕರು ಮಡಿಕೇರಿ, ಹಾಗೂ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ವೀರಾಜಪೇಟೆ ಇವರಿಗೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಉಂಟಾಗಿರುವ ವಿಳಂಬ ಹಾಗೂ ಅಲೆದಾಟಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

ಈ ಬಗ್ಗೆ ವೀರಾಜಪೇಟೆ ಭೂಮಾಪನ ಇಲಾಖೆಯ ಸಹಾಯಕ ಉಪ ನಿರ್ದೇಶಕ ಬಿ.ಡಿ. ಅರುಣ ಅವರಿಗೂ ಸಹ ಸಾರ್ವಜನಿಕರು ದೂರು ನೀಡಿದ್ದಾರೆ. ಡಿಸೆಂಬರ್ ೧೧ ರಿಂದ ಸರ್ಕಾರಿ ಭೂಮಾಪಕ ಹೆಚ್.ಸಿ. ಕಿರಣ್ ಅವರು ಕಚೇರಿಗೆ ಬರುತ್ತಿಲ್ಲ. ದೂರವಾಣಿ ಕರೆಯನ್ನು ತಿಂಗಳಿನಿAದ ಸ್ವೀಕರಿಸುತ್ತಿಲ್ಲ. ಹಲವಾರು ಸಾರ್ವಜನಿಕರ ಕಡತವನ್ನು ಭೂಮಾಪನ ಮಾಡಲು ತೆಗೆದುಕೊಂಡು ಹೋಗಿದ್ದು ಕಡತವನ್ನು ಸಹ ಕಚೇರಿಗೆ ಹಿಂದಿರುಗಿಸಿಲ್ಲ. ಭೂಮಾಪನ ಮಾಡಿರುವ ವರದಿಯನ್ನು ಸಹ ಕಚೇರಿಗೆ ಸಲ್ಲಿಸಿಲ್ಲ. ಅಧಿಕೃತವಾಗಿ ಇಲಾಖೆಯ ಅಧಿಕಾರಿಗಳಿಂದ ಅನುಮತಿ ಪಡೆದು ರಜೆಯನ್ನು ಸಹ ಪಡೆದಿಲ್ಲ, ಎಂದು ಅರುಣ ತಿಳಿಸಿದ್ದು ಅವರ ವಿರುದ್ಧ ನಿಯಮಾನುಸಾರ ಕ್ರಮಕ್ಕೆ ಈಗಾಗಲೇ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದ್ದಾರೆ.