ಕಣಿವೆ, ನ. ೩೦: ನಿಯತ್ತಿಗೆ ಹೆಸರಾಗಿರುವ ಶ್ವಾನವೊಂದು ತನ್ನನ್ನು ಸಾಕಿರುವ ಪಾಲಕರಿಗಾಗಿ ದಿನವಿಡೀ ಹೆದ್ದಾರಿಯಂಚಿನಲ್ಲಿ ಹುಡುಕಾಡುತ್ತಿದ್ದ ಪ್ರಸಂಗ ಆನೆಕಾಡು ಅರಣ್ಯದ ರಾಷ್ಟಿçÃಯ ಹೆದ್ದಾರಿಯಲ್ಲಿ ಗೋಚರಿಸಿತು.

ಕಪ್ಪು ಹಾಗೂ ಕಂದು ಮಿಶ್ರಿತ ಬಣ್ಣದ ಶ್ವಾನ ಆನೆಕಾಡು ಅರಣ್ಯದ ಹೆದ್ದಾರಿಯುದ್ದಕ್ಕೂ ಅಲ್ಲಲ್ಲಿ ನಿಂತು ತನ್ನ ಪಾಲಕನಿಗಾಗಿ ಪರಿತಪಿಸುತ್ತಿತ್ತು. ಹೆದ್ದಾರಿಯಲ್ಲಿ ಸಾಗುವ ವಾಹನಗಳ ವೇಗದ ಸದ್ದಿಗೆ ಹೆದರುತ್ತಾ ಹಾಗೂ ಬೆದರುತ್ತಾ ಪರದಾಡುತ್ತಿದ್ದ ಈ ಶ್ವಾನದ ದಯನೀಯ ಸ್ಥಿತಿಯನ್ನು ಕಾಣುತ್ತಿದ್ದ ಹೆದ್ದಾರಿ ಹೋಕರು ಅಯ್ಯೋ ಏನಿದು ಶ್ವಾನದ ಸ್ಥಿತಿ....? ಎಂದು ಮರುಗುತ್ತಿದ್ದರು. ಸಾಕು ನಾಯಿಯಾದ ಈ ಶ್ವಾನದ ಕೊರಳಲ್ಲಿ ಬೆಲ್ಟ್ ಕೂಡ ಧರಿಸಲಾಗಿತ್ತು.

ಹೊಟ್ಟೆ ಹಸಿದಿರಬಹುದಾದ ಈ ಶ್ವಾನ ಹೆದ್ದಾರಿಯುದ್ದಕ್ಕೂ ಅಲ್ಲಲ್ಲಿ ಜನರು ಕಸ ತ್ಯಾಜ್ಯಗಳನ್ನು ತುಂಬಿ ಬಿಸಾಕಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳ ವಾಸನೆಯನ್ನು ಗ್ರಹಿಸುತ್ತಾ ಆಹಾರ ಹುಡುಕುತ್ತಿರುವಂತೆಯೂ ಕಾಣುತ್ತಿತ್ತು. ಕೆಲವರು ದಾರಿ ತಪ್ಪಿ ಪರದಾಡುತ್ತಿದ್ದ ಈ ಅಮಾಯಕ ಹಾಗೂ ಅಸಹಾಯಕ ಶ್ವಾನದ ಸ್ಥಿತಿ ಕಂಡು ಕೂಗಿ ಕರೆದು ಕೈ ಸನ್ನೆ ಮಾಡಿದರೆ ನಿಂತು ನೋಡುತ್ತಿದ್ದ ಶ್ವಾನ ಹೆದರಿಕೆಯಿಂದ ಮುಂದೆ ಮುಂದೆ ಸಾಗುತ್ತಿತ್ತು.

-ವರದಿ : ಕೆ.ಎಸ್.ಮೂರ್ತಿ