ವೀರಾಜಪೇಟೆ, ನ. ೨೮: ಸಮೀಪದ ಕಡಂಗ ಅರಪಟ್ಟು ಗ್ರಾಮದಲ್ಲಿ ದೇವರಕಾಡಿನಲ್ಲಿ ನೆಲೆಸಿರುವ ನೆಲ್ಯಾಳು ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಮಹಾಪೂಜಾ ಸೇವೆ ಶ್ರದ್ಧಾಭಕ್ತಿಯಿಂದ ನೆರವೇರಿತು.

ದೇವಸ್ಥಾನದ ಅರ್ಚಕರಾದ ರಾಮ್‌ಪ್ರಸಾದ್ ಭಟ್ ಪೂಜಾ ವಿಧಾನಗಳನ್ನು ನೆರವೇರಿಸಿದರು. ಪ್ರತಿವರ್ಷ ನವೆಂಬರ್ ೧೬ ರಿಂದ ಡಿಸೆಂಬರ್ ೧೫ ರ ತನಕ ಈ ದೇವಸ್ಥಾನದಲ್ಲಿ ಪ್ರತಿದಿನ ನಿತ್ಯಪೂಜೆ ನಡೆಯುತ್ತದೆ. ಅರ್ಚಕರು ಮಹಾಪೂಜೆಯ ಪ್ರಯುಕ್ತ ಬೆಳಿಗ್ಗೆಯಿಂದಲೇ ಶ್ರೀ ಅಯ್ಯಪ್ಪ ಸ್ವಾಮಿಗೆ ಅಭಿಷೇಕ, ಕ್ಷೀರಾಭಿಷೇಕ, ಅಲಂಕಾರ ಸೇವೆ, ವಿಶೇಷ ಕರ್ಪೂರ ಆರತಿಯನ್ನು ಮಾಡಿ ಪ್ರಾರ್ಥಿಸಿದರು. ತದನಂತರ ಗ್ರಾಮಸ್ಥರು ಹರಕೆ ವಸ್ತುಗಳಾದ ಹುಲಿ, ನಾಯಿ, ಹಂದಿ, ಹಸು ಮೊದಲಾದ ಸಾಕುಪ್ರಾಣಿಗಳ ಮಣ್ಣಿನ ಮೂರ್ತಿಗಳನ್ನು ಸಮರ್ಪಿಸಿದರು. ಅರ್ಚಕರು ಮಹಾಮಂಗಳಾರತಿ ಮಾಡಿ ಪ್ರಸಾದ ವಿತರಿಸಿದರು. ಅನ್ನ ಸಂತರ್ಪಣಾ ಸೇವೆ ನಡೆಯಿತು. ಈ ಸಂದರ್ಭ ನೆಲ್ಯಾಳು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.