ಮಡಿಕೇರಿ, ನ. ೨೮: ಕಳೆದ ೨೪ ದಿನಗಳಿಂದ ಹೊದ್ದೂರು ಸಮೀಪದ ಪೆಗ್ಗೋಲಿ ಎಂಬಲ್ಲಿ ನಿವೇಶನ ಒದಗಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಗೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದಿಂದ ಯಾವುದೇ ಸ್ಪಂದನ ದೊರೆತಿಲ್ಲ.
ಶಾಸಕರು ನ್ಯಾಯಯುತ ಬೇಡಿಕೆ ಈಡೇರಿಕೆ ಕುರಿತು ಗಮನ ಹರಿಸಬೇಕೆಂದು ಬಹುಜನ ಕಾರ್ಮಿಕ ಸಂಘ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಆಗ್ರಹಿಸಿದೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಮುಖಂಡ ಕಿರಣ್ ಜಗದೀಶ್, ಹೊದ್ದೂರು ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಸರಕಾರಿ ಜಾಗವನ್ನು ನಿವೇಶನ ರಹಿತರಿಗೆ ನೀಡಬೇಕೆಂದು ಆಗ್ರಹಿಸಿ ಹಲವು ದಿನಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ.
ಈ ತನಕ ಅಧಿಕಾರಿಗಳು, ಜನಪ್ರತಿನಿಧಿಗಳು ಸೂಕ್ತ ಸ್ಪಂದನ ನೀಡದೆ ನಿರ್ಲಕ್ಷö್ಯ ವಹಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ, ಕಂದಾಯ ಸಚಿವರು, ಕಂದಾಯ ಆಯುಕ್ತರ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ.
ನಿರಾಶ್ರಿತರಿಗೆ ವಸತಿ ಸೌಲಭ್ಯ ಕಲ್ಪಿಸಬೇಕಾದ ಸರಕಾರ ಉಳ್ಳವರಿಗೆ ಭೂಮಿಯನ್ನು ಗುತ್ತಿಗೆ ನೀಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ಲಾಸ್ಟಿಕ್ ಟಾರ್ಪಲ್ ಮೂಲಕ ಶೆಡ್ ನಿರ್ಮಿಸಿಕೊಂಡು ೧೭೦ಕ್ಕೂ ಹೆಚ್ಚು ಕುಟುಂಬಗಳು ಹೊದ್ದೂರು ಸಮೀಪದ ಪೆಗ್ಗೋಲಿ ಎಂಬಲ್ಲಿ ವಾಸಿಸುತ್ತಿವೆ. ನಿತ್ಯ ಕನಿಷ್ಟ ೧೦೦ ಮಂದಿ ಅಹೋರಾತ್ರಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿದ್ದರೂ ಸ್ಥಳೀಯ ಶಾಸಕ ಮಂತರ್ ಗೌಡ ಅವರು ಆಗಮಿಸಿ ಜನರ ನೋವು ಆಲಿಸುವ ಕೆಲಸ ಮಾಡಿಲ್ಲ. ಮುಂದಾದರೂ ಶಾಸಕರು ನಮ್ಮ ನ್ಯಾಯಯುತ ಬೇಡಿಕೆಗೆ ಸ್ಪಂದಿಸಿ ನಿವೇಶನ ಕಲ್ಪಿಸಲು ಪ್ರಯತ್ನಿಸಬೇಕು. ಮುಂದಿನ ೧೦ ದಿನಗಳಲ್ಲಿ ಸೂಕ್ತ ಸ್ಪಂದನ ದೊರೆಯದಿದ್ದಲ್ಲಿ ತೀವ್ರ ಸ್ವರೂಪದದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಗೋಷ್ಠಿಯಲ್ಲಿ ಸಂಘಟನೆ ಪ್ರಮುಖರಾದ ಕುಮಾರಿ, ಸುಜಾತ, ಸತೀಶ್, ಪುನೀತ್ ಹಾಜರಿದ್ದರು.