*ಗೋಣಿಕೊಪ್ಪ, ನ. ೨೮: ೬೯ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಗೋಣಿಕೊಪ್ಪ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ವತಿಯಿಂದ ೧೯ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಪಟ್ಟಣದ ಬಸ್ ನಿಲ್ದಾಣದಲ್ಲಿ ಗ್ರೀಸ್ ಹಚ್ಚಿದ ಕಂಬ ಹತ್ತುವ ಸ್ಪರ್ಧೆಗೆ ಆಟೋ ಚಾಲಕರ ಸಂಘದ ಅಧ್ಯಕ್ಷ ಜಿಮ್ಮಿ ಸುಬ್ಬಯ್ಯ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಕನ್ನಡ ನಾಡು ನುಡಿಗೆ ತನ್ನದೇ ಆದ ರೀತಿಯಲ್ಲಿ ಕೊಡುಗೆಯನ್ನು ನೀಡಿರುವ ಆಟೋ ಚಾಲಕರ ಸಂಘ ಕಳೆದ ೧೯ ವರ್ಷಗಳಿಂದ ಕನ್ನಡ ರಾಜ್ಯೋತ್ಸವವನ್ನು ಯಶಸ್ವಿಯಾಗಿ ಆಚರಿಸಿಕೊಂಡು ಬರುತ್ತಿದೆ ಎಂದರು.

ಆಚರಣೆಯ ಅಂಗವಾಗಿ ಆಟೋ ಚಾಲಕರಿಗೆ ಕಾಲ್ಚೆಂಡು ಪಂದ್ಯಾಟವನ್ನು ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಏರ್ಪಡಿಸಲಾಯಿತು. ರಾಯಲ್ ಎಫ್‌ಸಿ ಪ್ರಥಮ ಸ್ಥಾನವನ್ನು ಮತ್ತು ಭಗತ್ ಸಿಂಗ್ ದ್ವಿತೀಯ ಸ್ಥಾನವನ್ನ ಪಡೆದುಕೊಂಡಿತು.

ಪ್ರಗತಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ತಂಡ ತೃತೀಯ ಬಹುಮಾನವನ್ನು ಪಡೆದುಕೊಂಡಿತು.

ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷರು ಕಾರ್ಯದರ್ಶಿಗಳು ಪದಾಧಿಕಾರಿಗಳು ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.