ಪೊನ್ನಂಪೇಟೆ, ನ. ೨೪: ಹರಿಯಾಣ ರಾಜ್ಯದ ರೋಹ್ವಕ್ ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ೬೮ ನೇ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ೧೭ ವರ್ಷದೊಳಗಿನ ಬಾಲಕಿಯರ ಹಾಕಿ ಪಂದ್ಯಾವಳಿಯಲ್ಲಿ ಕೊಡಗು ಆಟಗಾರರನ್ನೊಳಗೊಂಡ ಕರ್ನಾಟಕ ತಂಡ ತೆಲಂಗಾಣ ತಂಡದ ವಿರುದ್ಧ ೧೩-೦ ಗೋಲುಗಳ ಬಾರಿ ಅಂತರದ ಜಯಭೇರಿ ಬಾರಿಸಿ ಪ್ರೀ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ.
ಕೂಡಿಗೆ ಕ್ರೀಡಾ ವಸತಿ ಶಾಲೆಯ ವಿದ್ಯಾರ್ಥಿನಿ ಯುವಿಕ ನಾಯಕತ್ವದ ಕರ್ನಾಟಕ ತಂಡದ ಪರ ಶಾಲಿನಿ ೪, ಜೀವಿತ ೩ ಗೋಲು ಬಾರಿಸಿ ಮಿಂಚಿದರೆ, ಪ್ರೀತಿ, ಪ್ರತೀಕ್ಷಾ ತಲಾ ೨, ದೀಪ್ತಿ, ಹೇಮಾ ತಲಾ ೧ ಗೋಲು ಹೊಡೆದು ಭರ್ಜರಿ ಗೆಲುವಿಗೆ ಕಾರಣರಾದವರು.
ತಂಡದ ವ್ಯವಸ್ಥಾಪಕರಾದ ಮೂಕಳೆರ ಮೀರ ಅಶೋಕ್, ತರಬೇತುದಾರರಾದ ಎ. ಸಿ. ದಿನಮಣಿ ಅವರ ಮುಂದಾಳತ್ವದ ಕರ್ನಾಟಕ ಬಾಲಕಿಯರ ತಂಡದಲ್ಲಿ ಕೊಡಗಿನ ಹಾಕಿಪಟುಗಳಾದ ಭಾನುತೇಜ, ಹೇಮಾ, ಶಾಲಿನಿ, ಪ್ರತೀಕ್ಷ, ನಯನ, ಸಹನ, ಧನ್ಯ, ಅಂಕಿತ, ಪ್ರೀತಿ, ಪಂಚಮಿ, ಯುವಿಕ, ಹಾಗೂ ಹಾಸನ ಜಿಲ್ಲೆಯ ದೀಪ್ತಿ ಮತ್ತು ಜೀವಿತ ಪಾಲ್ಗೊಂಡಿದ್ದಾರೆ.