ಮಡಿಕೇರಿ, ಅ. ೩೧: ಶಿಥಿಲಾವಸ್ಥೆಯಲ್ಲಿ ಕೂಡಿದ್ದ ನಗರದ ಕೋಟೆಗೆ ಕಾಯಕಲ್ಪ ಒದಗಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ವೀಕ್ಷಿಸಿದರು.
ಕೋಟೆ ಆವರಣದಲ್ಲಿ ಹಾಗೂ ಒಳಭಾಗದಲ್ಲಿ ನಡೆಯುತ್ತಿರುವ ಕೆಲಸಗಳನ್ನು ಪರಿಶೀಲಿಸಿದ ಪೊನ್ನಣ್ಣ ಅವರು, ಮೆಚ್ಚುಗೆ ವ್ಯಕ್ತಪಡಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜರ ಕಾಲದ ಕೋಟೆ ಶಿಥಿಲಗೊಂಡು ಪುನಶ್ಚೇತನ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಹಾಗೂ ಪುರಾತತ್ವ ಇಲಾಖೆ ರೂಪುರೇಷೆ ತಯಾರಿಸಿ ಕೆಲಸಕ್ಕೆ ಕೈಹಾಕಿದ್ದು, ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ಈ ಮೂಲಕ ಇತಿಹಾಸ ಮರುಕಳಿಸುವ ಕೆಲಸವಾಗಿದೆ. ೨೦೨೩ರ ಫೆಬ್ರವರಿ ಅಥವಾ ಮಾರ್ಚ್ ತಿಂಗಳೊಳಗೆ ಕಾಮಗಾರಿ ಪೂರ್ಣಗೊಂಡು ವೀಕ್ಷಣೆಗೆ ಮುಕ್ತವಾಗುವ ವಿಶ್ವಾಸವಿದೆ ಎಂದು ತಿಳಿಸಿದರು.