ಸಿದ್ದಾಪುರ, ಅ. ೩೦: ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿAದ ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯುರ್ವೇದ ದಿನವನ್ನು ಆಚರಿಸಲಾಯಿತು. ಆಸ್ಪತ್ರೆಯ ಆವರಣದಲ್ಲಿ ಔಷಧೀಯ ಗಿಡಗಳ ತೋಟವನ್ನು ನಿರ್ಮಿಸುವ ಉದ್ದೇಶದಿಂದ ಹಲವು ಗಿಡಗಳನ್ನು ನೆಡಲಾಯಿತು.
ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ ವೈದ್ಯಾಧಿಕಾರಿ ಡಾ. ಯತಿರಾಜ್ ಮಾತನಾಡಿ, ತಾಲೂಕಿನ ಸರಕಾರಿ ಆಸ್ಪತ್ರೆಗಳಲ್ಲಿ ಔಷಧೀಯ ಗಿಡಗಳ ತೋಟ ನಿರ್ಮಿಸಲು ಮುಂದಿನ ದಿನಗಳಲ್ಲಿ ಪ್ರಯತ್ನಿಸಲಾಗುವುದು. ಇಲ್ಲಿ ನೆಟ್ಟಿರುವ ಗಿಡಗಳನ್ನು ಉತ್ತಮ ರೀತಿಯಲ್ಲಿ ಪೋಷಿಸಬೇಕೆಂದು ಆಸ್ಪತ್ರೆಯ ಸಿಬ್ಬಂದಿಗಳಿಗೆ ತಿಳಿಸಿದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಸರಕಾರಿ ಆಸ್ಪತ್ರೆಯ ಸಹಕಾರದೊಂದಿಗೆ ಆಸ್ಪತ್ರೆಯ ಆವರಣದಲ್ಲಿ ಔಷಧೀಯ ಗಿಡಗಳ ತೋಟ ನಿರ್ಮಿಸಲು ಪತ್ರಕರ್ತರು ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದರು.
ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಘವೇಂದ್ರ ಹಾಗೂ ಪರಿಸರ ಪ್ರೇಮಿ ರಾಜೇಂದ್ರ ಸಿಂಗ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ರಾಜ್ಯ ಸಂಘದ ನಿರ್ದೇಶಕ ಟಿ.ಎನ್ ಮಂಜುನಾಥ್, ಜಿಲ್ಲಾ ನಿರ್ದೇಶಕ ಎ.ಎನ್ ವಾಸು, ತಾಲೂಕು ಉಪಾಧ್ಯಕ್ಷ ಪುತ್ತಂ ಪ್ರದೀಪ್, ಸದಸ್ಯರಾದ ಕೃಷ್ಣ, ಅಂಥೋಣಿ, ಕಿಶೋರ್ ಕುಮಾರ್, ಇಸ್ಮಾಯಿಲ್, ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು. ಕಾರ್ಯಕ್ರಮದಲ್ಲಿ ಮಂಜುನಾಥ್ ಪ್ರಾರ್ಥಿಸಿ, ಆರ್. ಸುಬ್ರಮಣಿ ಸ್ವಾಗತಿಸಿ, ರವಿ ಕುಮಾರ್ ವಂದಿಸಿ, ಎ.ಎಸ್ ಮುಸ್ತಫ ವಂದಿಸಿದರು.