ಮಡಿಕೇರಿ, ಅ. ೩೦: ಕರ್ನಾಟಕ ಏಕೀಕರಣ ಮತ್ತು ಸ್ವಾತಂತ್ರö್ಯ ಹೋರಾಟದಲ್ಲಿ ಕರ್ನಾಟಕದ ಮಹಿಳೆಯರ ಪಾತ್ರ ಸ್ಮರಣೀಯ ವಾದುದೆಂದು ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೂಡಕಂಡಿ ದಯಾನಂದ ಹೇಳಿದರು.

ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಮಡಿಕೇರಿಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಯೋಗದೊಂದಿಗೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕರ್ನಾಟಕದ ಏಕೀಕರಣ ಮತ್ತು ಸ್ವಾತಂತ್ರö್ಯ ಚಳವಳಿಯಲ್ಲಿ ಕರ್ನಾಟಕದ ಮಹಿಳೆಯರು’ ಎಂಬ ವಿಷಯದಡಿ ಏರ್ಪಡಿಸಲಾಗಿದ್ದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಉಪನ್ಯಾಸ ನೀಡಿದರು. ಏಕೀಕರಣ ಹಾಗೂ ಸ್ವಾತಂತ್ರö್ಯ ಹೋರಾಟದಲ್ಲಿ ಎರಡು ಬಗೆಯ ಚಳುವಳಿ ನಡೆದಿದೆ. ಒಂದು ರಾಜ್ಯದೊಳಗಡೆ ಆದರೆ ಮತ್ತೊಂದು ರಾಷ್ಟç ಮಟ್ಟದಲ್ಲಿ ಆಗಿರುವಂತಹ ಚಳವಳಿ. ಎರಡರಲ್ಲೂ ಕರ್ನಾಟಕದ ಮಹಿಳೆಯರ ಪಾತ್ರ ಹಿರಿದಾದುದು. ತಮ್ಮ ಬದುಕು, ಬವಣೆಯನ್ನು ಬದಿಗಿಟ್ಟು ಬ್ರಟಿಷರ ವಿರುದ್ಧ ಹೋರಾಟ ಮಾಡಿ ಜೈಲುವಾಸ ಅನುಭವಿಸಿದವರೂ ಇದ್ದಾರೆ. ಜಯಶ್ರೀ ದೇವಿ ಲಿಗಾಡೆ, ಕಿತ್ತೂರು ಚೆನ್ನಮ್ಮ, ಯಶೋಧರಮ್ಮ ದಾಸಪ್ಪ, ರಾಣಿ ಅಬ್ಬಕ್ಕ, ಬಳ್ಳಾರಿಯ ರುದ್ರಮ್ಮ, ನಾಗಮ್ಮ ಪಾಟೀಲ, ಶಕುಂತಲಾ, ಸೇರಿದಂತೆ ಕೊಡಗಿನ ಗೌರಮ್ಮ ಅವರುಗಳ ಸ್ವಾತಂತ್ರö್ಯ ಹೋರಾಟಗಳ ಬಗ್ಗೆ ಸುಧೀರ್ಘವಾಗಿ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು.

ಮಹಿಳೆಯರ ಹೋರಾಟ- ತ್ಯಾಗದ ಬಗ್ಗೆ ಸವಿವರವಾಗಿ ತೆರೆದಿಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸ್ನೇಹ ಸಿರಿ ಬಳಗದ ಅಧ್ಯಕ್ಷ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್; ಇತಿಹಾಸದಲ್ಲಿ ದಾಖಲಾಗಿರುವ ಮಹಿಳೆಯರ ಸಾಧನೆಗಳ ಬಗ್ಗೆ ಯುವ ಪೀಳಿಗೆಗೆ ತಲಪಿಸುವಲ್ಲಿ ವಿಫಲವಾಗಿರುವದರಿಂದ ಹಲವಷ್ಟು ಮಹಿಳೆಯರ ಹೋರಾಟ ಹಾಗೂ ತ್ಯಾಗದ ಬಗ್ಗೆ ಯಾರಿಗೂ ತಿಳಿದಿಲ್ಲ. ಅಂತಹವರನ್ನು ಗುರುತಿಸುವ ಹಾಗೂ ಸ್ಮರಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರು ವದಾಗಿ ಹೇಳಿದರು. ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಅಂಗವಾಗಿ ಬಳಗದ ಮೂಲಕ ವರ್ಷದಲ್ಲಿ ೫೦ ಕಾರ್ಯಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಿದ್ದು, ಇದು ಬಳಗದ ೩೯ನೇ ಕಾರ್ಯಕ್ರಮವಾಗಿದೆ. ನಾಡು, ನುಡಿ, ಸಂಸ್ಕೃತಿಯನ್ನು ಬಲಪಡಿಸುವನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವದಾಗಿ ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಕ್ತಿ ದಿನಪತ್ರಿಕೆ ಉಪ ಸಂಪಾದಕ ಹಾಗೂ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ; ವಿದ್ಯಾರ್ಥಿನಿಯರಿಗಾಗಿ ಸರಕಾರ ಪ್ರತ್ಯೇಕ ಮಹಿಳಾ ಕಾಲೇಜನ್ನು ಸ್ಥಾಪಿಸಿ ಉತ್ತೇಜನ ನೀಡುತ್ತಿದೆ, ಇದರಿಂದಾಗಿ ವಿದ್ಯಾರ್ಥಿನಿಯರಿಗೆ ಯಾವದೇ ಅಡೆ, ತಡೆ ಇಲ್ಲದೆ ಸ್ವತಂತ್ರವಾಗಿ ವಿದ್ಯಾರ್ಜನೆ ಮಾಡಲು ಸಾಧ್ಯವಾಗುತ್ತದೆ. ವಿದ್ಯಾರ್ಥಿನಿಯರು ಸಾಮಾಜಿಕ ಜಾಲತಾಣಗಳಲ್ಲಿ ಕಾಲಕಳೆಯುತ್ತಾ ಆಮಿಷಗಳಿಗೆ ಬಲಿಯಾಗಿ ಭವಿಷ್ಯ ಹಾಳುಮಾಡಿಕೊಳ್ಳದೆ, ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತಾಗಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಗಳು ನೀಡುವಂತಹ ಉಪನ್ಯಾಸದ ಬಗ್ಗೆ ಗಮನಹರಿಸಿ ಉತ್ತಮವಾದವುಗಳನ್ನು ಅಭ್ಯಸಿಸಬೇಕೆಂದು ಕಿವಿ ಮಾತು ಹೇಳಿದರು.

ಮತ್ತೋರ್ವ ಅತಿಥಿ ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಸಂಚಾಲಕ ತೆನ್ನೀರ ಮೈನಾ ಮಾತನಾಡಿ; ಕೊಡಗಿನ ಇತಿಹಾಸ ಮತ್ತು ಸ್ವಾತಂತ್ರö್ಯ ಹೋರಾಟದ ಬಗ್ಗೆ ಹೇಳಿದರು. ವಿದ್ಯಾರ್ಥಿನಿಯರು ಸಿನಿಮಾ ನಟರ ಅಭಿಮಾನಿಗಳಾಗಿ ಸಿನಿಮಾದಲ್ಲಿನ ಪಾತ್ರಗಳನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ನಾಡಿಗಾಗಿ ಹೋರಾಡಿದ ಮೇಧಾವಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇತಿಹಾಸದ ಬಗ್ಗೆ ಯುವಪೀಳಿಗೆಗೆ ತಿಳಿಹೇಳುವಲ್ಲೂ ನಾವೂ ಸೇರಿದಂತೆ ನಮ್ಮ ಹಿರಿಯರು ಕೂಡ ಎಡವಿರುವದರಿಂದ ಇಂದು ಇತಿಹಾಸಕಾರರನ್ನು ಮರೆಯುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಕೋರನ ಸರಸ್ವತಿ ಪ್ರಕಾಶ್ ಮಾತನಾಡಿ; ಹರಿದು ಹಂಚಿಹೋಗಿದ್ದ ಕನ್ನಡ ನಾಡು ಭಾಷಾವಾರು ಪ್ರಾಂತ್ಯಗಳ ವರ್ಗೀಕರಣದಿಂದ ಕರ್ನಾಟಕ ವಾಯಿತು. ಸುವರ್ಣ ಸಂಭ್ರಮದ ಈ ಹೊತ್ತಿನಲ್ಲಿ ನಮ್ಮೆಲ್ಲರ ಜವಾಬ್ದಾರಿ ಹೆಚ್ಚಿದೆ. ಭಾಷೆಯನ್ನು ಗೌರವಿಸುತ್ತಾ ಕನ್ನಡ ನಾಡಿನ ಏಳಿಗೆಗೆ ನಾವೆಲ್ಲ ಜೊತೆಯಾಗಬೇಕು. ಕನ್ನಡದ ಹೆಣ್ಣು ಮಕ್ಕಳು ಸ್ವಾತಂತ್ರö್ಯ ಹೋರಾಟದಲ್ಲಿ ಪಾಲ್ಗೊಂಡಿರುವದು ನಮ್ಮ ಹೆಮ್ಮೆ. ಅವರ ಬದುಕು ನಮಗೆ ದಾರಿದೀಪವಾಗಲಿ ಎಂದು ಆಶಿಸಿದರು.

ಕಾಲೇಜಿನ ಸಹ ಪ್ರಾಧ್ಯಾಪಕ ಎನ್.ಪಿ. ಸತೀಶ್ ಹಿಂದೆ ಭಾರತೀಯ ಸೇನೆಯಲ್ಲಿ ಮಹಿಳೆಯರದ್ದೇ ರೆಜಿಮೆಂಟ್ ಇದ್ದ ಬಗ್ಗೆ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು. ವಿದ್ಯಾರ್ಥಿನಿಯರಾದ ಗಾಯನ ಮತ್ತು ತಂಡದವರು ಬಾರಿಸು ಕನ್ನಡ ಡಿಂಡಿಮವ ಗೀತೆಯನ್ನು ಹಾಡಿದರೆ, ಪ್ರಿಯಾ ಸ್ವಾಗತಿಸಿದರು. ರಾಜ್ಯಶಾಸ್ತç ಸಹಾಯಕ ಪ್ರಾಧ್ಯಾಪಕಿ ನಿರ್ಮಲ ಪೂವಯ್ಯ ನಿರೂಪಿಸಿದರೆ, ವಿದ್ಯಾರ್ಥಿನಿ ವಿದ್ಯಾಶ್ರೀ ವಂದಿಸಿದರು.