ಸೋಮವಾರಪೇಟೆ, ಅ. ೩೦: ಚಿತ್ರನಟ ಡಾ. ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ ಅಪ್ಪು ಅಭಿಮಾನಿಗಳ ಬಳಗದ ವತಿಯಿಂದ ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಮಧ್ಯಾಹ್ನ ಅನ್ನದಾನ ಏರ್ಪಡಿಸಲಾಗಿತ್ತು.
ಈ ಸಂದರ್ಭ ಮಾತನಾಡಿದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಶಿವಪ್ರಸಾದ್ ಅವರು, ಚಲನಚಿತ್ರ ನಟರಾಗಿ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದ ಪುನೀತ್ ರಾಜ್‌ಕುಮಾರ್ ಅವರ ನೆನಪಿಗಾಗಿ ಅವರ ಅಭಿಮಾನಿಗಳ ಬಳಗದಿಂದ ಇಂತಹ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. ಅಪ್ಪು ಅಭಿಮಾನಿಗಳ ಬಳಗದ ಅಧ್ಯಕ್ಷ ಅಬ್ಬೂರುಕಟ್ಟೆ ರವಿಕುಮಾರ್ ಅವರು ಮಾತನಾಡಿ, ಪುನೀತ್ ರಾಜ್‌ಕುಮಾರ್ ಅವರು ನಿಧನರಾಗಿ ೩ ವರ್ಷ ಗಳಾಗಿದ್ದು, ಪ್ರತಿ ವರ್ಷವೂ ಬಳಗದಿಂದ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡುತ್ತಿದ್ದೇವೆ. ಯಾವುದೇ ವ್ಯಕ್ತಿ ಮರಣದ ನಂತರವೂ ಜನಮಾನಸದಲ್ಲಿ ಉಳಿಯಬೇಕಾದರೆ ಅವರು ಇದ್ದಾಗ ಮಾಡಿದ ಜನಸೇವೆಗಳೇ ಕಾರಣವಾಗುತ್ತವೆ ಎಂದರು. ಈ ಸಂದರ್ಭ ಅಪ್ಪು ಅಭಿಮಾನಿಗಳ ಬಳಗದ ಉಪಾಧ್ಯಕ್ಷ ರಮೇಶ್, ಪದಾಧಿಕಾರಿಗಳಾದ ರವಿ, ಚೇತನ್, ಮೋಕ್ಷಿತ್, ದೀಪಕ್, ಪ್ರಶಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.