ಸೋಮವಾರಪೇಟೆ, ಅ. ೨೨: ಅಲೋಪತಿ ವೈದ್ಯಕೀಯ ವ್ಯವಸ್ಥೆಗೆ ಹೆಚ್ಚಿನ ಸಾರ್ವಜನಿಕರು ಆಸಕ್ತಿ ವಹಿಸಿದ್ದು, ಹೋಮಿಯೋಪತಿ ಚಿಕಿತ್ಸಾ ಸೌಲಭ್ಯದತ್ತಲೂ ಮನಸ್ಸು ಮಾಡಬೇಕು. ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಹೋಮಿಯೋಪತಿ, ಯುನಾನಿ, ಆಯುರ್ವೇದ, ಯೋಗ ಸಹಕಾರಿಯಾಗಿದೆ ಎಂದು ಶಾಸಕ ಡಾ. ಮಂತರ್ ಗೌಡ ಅಭಿಪ್ರಾಯಿಸಿದರು.
ಇಲ್ಲಿನ ಆಯುಷ್ ಇಲಾಖೆಗೆ ಒಳಪಡುವ ಸರ್ಕಾರಿ ಹೋಮಿಯೋಪತಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾರ್ವಜನಿಕರು ಹಿಂದೆ ಬೀಳಬಾರದು. ಸಾರ್ವಜನಿಕರ ಅಭ್ಯುದಯಕ್ಕಾಗಿಯೇ ಸರ್ಕಾರ ಕೆಲಸ ಮಾಡುತ್ತಿದ್ದು, ಸರ್ಕಾರಿ ಸೇವೆ ಹಾಗೂ ಸೌಲಭ್ಯಗಳನ್ನು ಹೊಂದಿಕೊಳ್ಳಬೇಕು. ಅಲೋಪತಿ ಚಿಕಿತ್ಸಾ ಕ್ರಮಗಳೊಂದಿಗೆ ಆಯುರ್ವೇದಿಕ್ ಚಿಕಿತ್ಸಾ ವ್ಯವಸ್ಥೆಯನ್ನೂ ಬಳಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಸೋಮವಾರಪೇಟೆ ಸರ್ಕಾರಿ ಹೋಮಿಯೋಪತಿ ಆಸ್ಪತ್ರೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸುಧಾರಿತ ಕ್ರಮಗಳನ್ನು ಅಳವಡಿಸಲಾಗಿದೆ.
(ಮೊದಲ ಪುಟದಿಂದ) ಆಕ್ಯುಪಂಕ್ಚರ್, ಕಪ್ಪಿಂಗ್ ಪ್ರೊಸೀರ್ಸ್ ಸೇರಿದಂತೆ ಇನ್ನಿತರ ಸೌಲಭ್ಯಗಳಿವೆ. ಅಲೋಪತಿ ವೈದ್ಯಕೀಯ ಪದ್ಧತಿಗಿಂತಲೂ ಹೋಮಿಯೋಪತಿ, ಆಯುಷ್, ಯುನಾನಿ, ಯೋಗ ಚಿಕಿತ್ಸಾ ಕ್ರಮಗಳ ಬಗ್ಗೆ ಮಾಹಿತಿ ಪಡೆದು, ಅದರ ಉಪಯೋಗ ಪಡೆದುಕೊಳ್ಳಬೇಕೆಂದರು.
ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಿಕೊಂಡಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಶಾಸಕರು, ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆಗಳ ಬಗ್ಗೆ ಮಾಹಿತಿ ಪಡೆದರು. ಸರ್ಕಾರದಿಂದ ಯಾವುದೇ ಹೆಚ್ಚಿನ ಸವಲತ್ತು ಬೇಕಿದ್ದರೂ ನೀಡಲಾಗುವುದು. ಅಭಿವೃದ್ಧಿ ಹಾಗೂ ಉಪಕರಣಗಳಿಗೆ ಅನುದಾನ ಬೇಕಿದ್ದರೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಆರೋಗ್ಯ ಕಾಪಾಡಿಕೊಂಡರೆ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ. ಈ ಹಿನ್ನೆಲೆ ಆರೋಗ್ಯದ ಬಗ್ಗೆ ಪ್ರತಿಯೋರ್ವರೂ ಕಾಳಜಿ ವಹಿಸಬೇಕೆಂದು ಶಾಸಕರು ಸಲಹೆ ನೀಡಿದರು. ಈ ಸಂದರ್ಭ ಹೋಮಿಯೋಪತಿ ವೈದ್ಯರಾದ ಡಾ. ಸೌಪರ್ಣಿಕ, ಆಯುರ್ವೇದಿಕ್ ವೈದ್ಯರಾದ ಶ್ವೇತಾ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.