ಮಡಿಕೇರಿ, ಅ. ೨೨ : ಮಂಜಿನ ನಗರಿ ಎಂದೇ ಖ್ಯಾತಿವೆತ್ತಿರುವ ಮಡಿಕೇರಿ ಜಿಲ್ಲಾ ಕೇಂದ್ರ ಸ್ಥಾನವೂ ಹೌದು., ಪ್ರವಾಸಿಗರ ಆಕರ್ಷಣೀಯ ತಾಣವೂ ಆಗಿರುವ ಈ ಮಡಿಕೇರಿ ನಗರದ ರಸ್ತೆಗಳ ದುಸ್ಥಿತಿಯನ್ನು ನೋಡಿದರೆ ಯಾವದೋ ಅಭಿವೃದ್ಧಿಯೇ ಕಾಣದ ಕುಗ್ರಾಮವೇ ಎಂದೆನಿಸುತ್ತದೆ. ಅಷ್ಟೊಂದು ಹದಗೆಟ್ಟಿದೆ ಇಲ್ಲಿನ ರಸ್ತೆಗಳು., ಈ ನಡುವೆ ಆಡಳಿತ ಹಾಗೂ ಅಧಿಕಾರಿಗಳ ನಿರ್ಲಕ್ಷö್ಯಕ್ಕೆ ಒಳಗಾಗಿ ಮುಖ್ಯ ರಸ್ತೆಯೊಂದು ನೀರು ಪಾಲಾಗುವ ಹಂತದಲ್ಲಿದೆ..!
ಮಡಿಕೇರಿ ನಗರದ ರೇಸ್ಕೋರ್ಸ್ ರಸ್ತೆ ಮೂಲಕ ಗಾಳಿಬೀಡು ಕಡೆಗೆ ತೆರಳುವ ಮುಖ್ಯ ರಸ್ತೆ ಸಾಯಿ ತರಬೇತಿ ಕೇಂದ್ರದ ಬಳಿಯ ತಿರುವಿನಲ್ಲಿ ಕುಸಿದಿದೆ. ಗಾಳಿಬೀಡು, ಎಫ್.ಎಂ.ಸಿ. ಕಾಲೇಜು, ಪ್ರಮುಖ ರೆಸಾರ್ಟ್ಗಳು, ಜಿಲ್ಲಾ ಪಂಚಾಯತ್ ಕಚೇರಿ, ಜಿಲ್ಲಾ ನ್ಯಾಯಾಲಯ ಸೇರಿದಂತೆ ವಿವಿಧೆಡೆಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದೆ. ಕಳೆದ ೨೦೧೮ರಲ್ಲಿ ಭೂಕುಸಿತ ಉಂಟಾದ ಸಂದರ್ಭ ನಗರದ ರಾಜಕಾಲುವೆಗೆ ಒತ್ತಿಕೊಂಡಿರುವ ಈ ರಸ್ತೆಯ ಒಂದು ಬದಿ ಕುಸಿದಿತ್ತು. ಆ ಸಂದರ್ಭದಲ್ಲಿ ಬಿರುಕು ಬಿಟ್ಟ ಜಾಗಕ್ಕೆ ಒಂದಿಷ್ಟು ಕಾಂಕ್ರಿಟ್ ಹಾಕಿ, ಬ್ಯಾರಿಕೇಡ್ ಇರಿಸಿ ನಗರಸಭೆ ಆಡಳಿತ ತನ್ನ ಕರ್ತವ್ಯ ಮುಗಿಯಿತೆಂದು ಸುಮ್ಮನಾಗಿತ್ತು.
ಇದೀಗ ಈ ವರ್ಷದ ಭಾರೀ ಮಳೆಗೆ ಮತ್ತೆ ಈ ರಸ್ತೆ ಬದಿ ಕುಸಿದು ಬಿದ್ದಿದೆ. ರಸ್ತೆಯ ಅಂಚಿನಲ್ಲಿ ಹರಿಯುವ ರಾಜಕಾಲುವೆಯ ನೀರು ರಸ್ತೆಯ ಅಡಿಭಾಗದ ಮಣ್ಣನ್ನು ಕೊರೆದು ಹಾಕಿದ್ದು, ರಸ್ತೆಯ ಮೇಲ್ಭಾಗ ಇಬ್ಭಾಗವಾಗಿದೆ. ಈಗಲೂ ನಗರಸಭೆ ಪೊಲೀಸ್ ಇಲಾಖೆ ಸಹಕಾರದೊಂದಿಗೆ ಬ್ಯಾರಿಕೇಡ್ ಇರಿಸಿ ರಸ್ತೆ ಕುಸಿ ಯುವದನ್ನೇ ಕಾಯುತ್ತಿರುವಂತಿದೆ..!
ರಸ್ತೆ ಬಂದ್..!
ರಸ್ತೆ ತೀರಾ ಅಪಾಯಕಾರಿ ಸ್ಥಿತಿಯಲ್ಲಿರುವದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಇಲಾಖೆಯವರು ಈ ರಸ್ತೆಯನ್ನು ಬ್ಯಾರಿಕೇಡ್
(ಮೊದಲ ಪುಟದಿಂದ) ಇರಿಸಿ ಸಂಪೂರ್ಣ ಬಂದ್ ಮಾಡಿದ್ದಾರೆ. ಕಾಲೇಜು, ಗಾಳಿಬೀಡು ಕಡೆಗಳಿಗೆ ತೆರಳುವ ವಾಹನಗಳಿಗೆ ಮೇಲ್ಭಾಗವಾಗಿ ವಿಜಯ ವಿನಾಯಕ ದೇವಾಲಯ ಬಳಿಯ ರಸ್ತೆಗಾಗಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಜತೆಗೆ ಏಕ ಮುಖ ಸಂಚಾರ ವ್ಯವಸ್ಥೆ ಮಾಡಿದ್ದು, ಸಂಚಾರ ನಿಯಂತ್ರಣಕ್ಕಾಗಿ ಪೊಲೀಸ್ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.
ಸಿಬ್ಬಂದಿಗಳು ಹೈರಾಣು..!
ರಸ್ತೆ ಬಂದ್ ಮಾಡಿ ಏಕ ಮುಖ ಸಂಚಾರ ವ್ಯವಸ್ಥೆ ಮಾಡಿರುವದರಿಂದ ದೇವಾಲಯದ ಬಳಿ ಪೊಲೀಸ್ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಕಳೆದ ಹಲವು ತಿಂಗಳಿನಿAದ ಸುರಿಯುವ ಗಾಳಿ, ಮಳೆಯನ್ನು ಲೆಕ್ಕಿಸದೆ ಇವರುಗಳು ಇಲ್ಲಿ ಅನಿವಾರ್ಯವಾಗಿ ಕರ್ತವ್ಯ ನಿರ್ವಹಿಸಬೇಕಾಗಿದೆ. ನಿಲ್ಲಲು ಸರಿಯಾದ ಸ್ಥಳ, ವ್ಯವಸ್ಥೆ ಇಲ್ಲದೆ ರಸ್ತೆ ಮಧ್ಯೆ ನಿಂತು ಕರ್ತವ್ಯ ನಿರ್ವಹಿಸುತ್ತಿರುವ ಇವರುಗಳ ಪಾಡು ಹೇಳ ತೀರದು..!
ಆಸಕ್ತಿ ತೋರದ ಆಡಳಿತ..!
ರಸ್ತೆ ಕುಸಿದು ವರ್ಷಗಳೇ ಕಳೆದರೂ ಅದನ್ನು ದುರಸ್ತಿ ಪಡಿಸುವತ್ತ ನಗರಸಭೆ ಆಡಳಿತ ಆಸಕ್ತಿ ತೋರಲೇ ಇಲ್ಲ. ರಸ್ತೆಗೆ ತಡೆಗೋಡೆ ನಿರ್ಮಾಣಕ್ಕೆ ಸರಕಾರದ ಅಂಗಸAಸ್ಥೆ ನಿರ್ಮಿತಿ ಕೇಂದ್ರಕ್ಕೆ ರೂ.೧ಕೋಟಿಗೆ ಗುತ್ತಿಗೆ ನೀಡಿ ಸುಮ್ಮನಾಗಿದೆ. ಇತ್ತ ನಿರ್ಮಿತಿ ಕೇಂದ್ರದವರು ಚುನಾವಣೆ ನೀತಿ ಸಂಹಿತೆ ಎಂದೆಲ್ಲ ಕಾರಣ ಹೇಳುತ್ತಾ ಬೇಸಿಗೆಯಲ್ಲಿ ಯಾವದೇ ಕೆಲಸ ಆರಂಭಿಸದೆ ಮಳೆಗಾಲ ಸಮೀಪಿಸುತ್ತಿದ್ದಂತೆ ರಾಜಕಾಲುವೆಯನ್ನು ಅಗೆದು ಕೆಲಸ ಆರಂಭಿಸಿದರು. ಕಾಂಕ್ರಿಟ್ ಹಾಕಿ ಪಿಲ್ಲರ್ಗೆ ಕಬ್ಬಿಣದ ಸರಳುಗಳನ್ನು ಹಾಕಿ ಸುಮ್ಮನಾಗಿದ್ದಾರೆ. ಇದರಿಂದಾಗಿ ರಸ್ತೆಗೆ ಆತುಕೊಂಡಿದ್ದ ಮಣ್ಣು ಮತ್ತೆ ಕುಸಿದು ಮತ್ತಷ್ಟು ಅವಾಂತರಕ್ಕೆ ಕಾರಣವಾಗಿದೆ..! ಆ ನಂತರ ನಿರ್ಮಿತಿ ಕೇಂದ್ರದವರು ಇತ್ತ ತಲೆ ಹಾಕಿಲ್ಲ.
ಕುಸಿಯುವ ಭೀತಿ..!
ಇದೀಗ ಈ ವರ್ಷ ಮಳೆಗಾಲ ಮುಗಿಯುವಂತೆ ಕಾಣುತ್ತಿಲ್ಲ. ಜೊತೆಗೆ ರಸ್ತೆ ಬದಿಯ ಮಣ್ಣು ಕುಸಿಯುತ್ತಲೇ ಇದೆ. ರಸ್ತೆಯ ಬಿರುಕು ಕೂಡ ಅಧಿಕವಾಗುತ್ತಿದೆ. ಕಾಮಗಾರಿಗೆಂದು ತಂದು ಹಾಕಲಾಗಿರುವ ಕಬ್ಬಿಣದ ಸಾಮಗ್ರಿಗಳು ತುಕ್ಕು ಹಿಡಿಯುತ್ತಿವೆ. ಮರಳು ಮಾಯವಾಗುತ್ತಿದೆ. ಈ ರಸ್ತೆ ನೀರು ಪಾಲಾಗುವದನ್ನೇ ಆಡಳಿತ ಕಾಯುತ್ತಿರುವಂತಿದೆ..!
ಒAದು ವೇಳೆ ಈ ರಸ್ತೆ ಕುಸಿದು ಬಿದ್ದರೆ ಮೇಲಿನ ರಸ್ತೆ ಕೂಡ ಕುಸಿಯಲಿದ್ದು, ಸನಿಹದಲ್ಲಿರುವ ಮನೆಗಳಿಗೂ ಅಪಾಯ ತಪ್ಪಿದ್ದಲ್ಲ..!