ಅ. ೨೨: ಜಾತಿ ಗಣತಿ ವರದಿಯನ್ನು ಅಂಗೀಕರಿಸಿ, ಶೀಘ್ರ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಹಾಗೂ ದಲಿತ ಹಿಂದುಳಿದ ವರ್ಗಗಳ ಮೀಸಲಾತಿ ಮಿತಿಯ ಪ್ರಮಾಣವನ್ನು ಶೇಕಡ ೫೦ ರಿಂದ ಶೇಕಡ ೭೫ ಕ್ಕೆ ಹೆಚ್ಚಿಸುವಂತೆ ಮತ್ತು ಹುದಿಕೇರಿ ಹೋಬಳಿಯ ಹೈಸೊಡ್ಲೂರು ಗ್ರಾಮದಲ್ಲಿ ೭೪ ಆದಿವಾಸಿ ಕುಟುಂಬಗಳಿಗೆ ಗುರುತು ಮಾಡಿರುವ ಎಂಟು ಎಕರೆ ಜಾಗಕ್ಕೆ ಮೂಲಭೂತ ಸೌಲಭ್ಯ ಹಾಗೂ ಕೆ.ಬಾಡಗ ವಿಭಾಗದ ಸರಕಾರಿ ಜಾಗದಲ್ಲಿ ವಾಸವಿರುವ ಆದಿವಾಸಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಪೊನ್ನಂಪೇಟೆಯಲ್ಲಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿತು.
ತಾಲೂಕು ತಹಶೀಲ್ದಾರ್ ಕಚೇರಿ ಎದುರು ಜಮಾವಣೆಗೊಂಡ ದಲಿತ ಸಂಘರ್ಷ ಸಮಿತಿ ಮುಖಂಡರು ಮತ್ತು ಕಾರ್ಯಕರ್ತರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಈ ಸಂದರ್ಭ ದಲಿತ ಸಂಘರ್ಷ ಸಮಿತಿಯ ಕೊಡಗು, ಮೈಸೂರು ಜಿಲ್ಲಾ ವಿಭಾಗೀಯ ಸಂಚಾಲಕ ಕೃಷ್ಣಪ್ಪ ಮಾತನಾಡಿ, ಜಾತಿ ಗಣತಿಯನ್ನು ಅನುಷ್ಟಾನಗೊಳಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯು ರಾಜ್ಯದಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಪೊನ್ನಂಪೇಟೆಯಲ್ಲೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಜಾತಿ ಗಣತಿ ಅನುಷ್ಠಾನಗೊಳಿಸಿದಲ್ಲಿ ಸಾಮಾಜಿಕವಾಗಿ ಹಿಂದುಳಿದ ದಲಿತರು ಹಾಗೂ ಆದಿವಾಸಿಗಳಿಗೆ ಉತ್ತಮ ಅವಕಾಶಗಳು ದೊರೆಯಲಿದೆ ಎಂದರು.
ಸಮಿತಿಯ ಜಿಲ್ಲಾ ಸಂಚಾಲಕ ರಜನಿಕಾಂತ್ ಮಾತನಾಡಿ, ಜಾತಿ ಗಣತಿ ಅನುಷ್ಠಾನದ ಜತೆಗೆ ಹೈಸೊಡ್ಲೂರು ಗ್ರಾಮದಲ್ಲಿ ೭೪ ಆದಿವಾಸಿ ಕುಟುಂಬಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಮಳೆಗಾಲದಲ್ಲಿ ನಿವೇಶನಗಳಿಗೆ ಪ್ಲಾಸ್ಟಿಕ್ ಹೊದಿಕೆ ನೀಡುವಂತೆ ಮನವಿ ಮಾಡಿದರೂ ಸಹ ಸರ್ಕಾರ ನೀಡಿಲ್ಲ. ನಾಲ್ಕು ಎಕರೆ ಜಾಗವನ್ನು ಮಂಜೂರು ಮಾಡುವುದಾಗಿ ಅಧಿಕಾರಿಗಳು ಹೇಳಿದ್ದರೂ ಸಹ ಇದುವರೆಗೂ ಮಂಜೂರು ಮಾಡಿಲ್ಲವೆಂದು ಆರೋಪಿಸಿದರು. ಮುಂದಿನ ಒಂದು ವಾರದೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಈ ಸಂದರ್ಭ ತಾಲೂಕು ತಹಶೀಲ್ದಾರ್ ಮೋಹನ್ ಕುಮಾರ್ ಅವರಿಗೆ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಮೋಹನ್ ಕುಮಾರ್, ಕೆ.ಬಾಡಗ ವಿಭಾಗದಲ್ಲಿ ಸರ್ಕಾರಿ ಜಾಗದಲ್ಲಿ ವಾಸವಿದ್ದು ಮೂಲಭೂತ ಸೌಕರ್ಯಗಳು ಇಲ್ಲದ ಕಾರಣ ಪೊನ್ನಂಪೇಟೆ ಹುದಿಕೇರಿ ಹೈಸೊಡ್ಲೂರು ಗ್ರಾಮದಲ್ಲಿ ಈಗಾಗಲೇ ತಾಲೂಕು ಕಾರ್ಯನಿರ್ವಹಣಾಧಿಕಾರಿಯವರ ಹೆಸರಿನಲ್ಲಿ ಜಾಗ ಮಂಜೂರು ಆಗಿದ್ದು, ಅಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ ವಿತರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಜಾತಿ ಗಣತಿಯ ಮನವಿಯನ್ನು ಸರ್ಕಾರಕ್ಕೆ ತಲುಪಿಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಸಂಘಟನೆಯ ತಾಲೂಕು ಸಂಚಾಲಕ ನಾಗೇಶ್, ಸಂಘಟನಾ ಸಂಚಾಲಕ ಕರ್ಕು ಮುಖಂಡರಾದ ನಿತೇಶ್, ಸುರೇಶ್, ಗಣೇಶ್, ಗಿರೀಶ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.