ಮಡಿಕೇರಿ, ಅ. ೨೨: ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಏರ್ಪಡಿಸಲಾಗಿದ್ದ ಥ್ರೋ ಬಾಲ್ ಪಂದ್ಯಾಟದಲ್ಲಿ ಮಡಿಕೇರಿಯ ಶ್ರೀ ರಾಜೇಶ್ವರಿ ವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅನುಷಾ ಎಂ.ಜಿ. ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಮಡಿಕೇರಿ ತಾಲೂಕು ಮಟ್ಟದ ಥ್ರೋ ಬಾಲ್ ಕ್ರೀಡಾಕೂಟವು ಶ್ರೀ ರಾಜೇಶ್ವರಿ ವಿದ್ಯಾಲಯದಲ್ಲಿ ನಡೆದಿದ್ದು, ಸಂಸ್ಥೆಯ ಪಿಯುಸಿ ವಿದ್ಯಾರ್ಥಿನಿಯರ ತಂಡ ಈ ಪಂದ್ಯಾಟಗಳಲ್ಲಿ ಭಾಗವಹಿಸಿ ಎರಡನೇ ಸ್ಥಾನ ಪಡೆದುಕೊಂಡಿತು. ಈ ಪೈಕಿ ವಿದ್ಯಾರ್ಥಿನಿಯರಾದ ಅನುಷಾ ಎಂ.ಜಿ ಮತ್ತು ಜೈನಬ್ ಅಸ್ಮೀಯ ಜಿಲ್ಲಾ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದರು.
ನಂತರ ಮೂರ್ನಾಡು ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕೊಡಗು ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜುಗಳ ಥ್ರೋ ಬಾಲ್ ಪಂದ್ಯಾಟಗಳಲ್ಲಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ವೀರಾಜಪೇಟೆ ತಾಲೂಕು ವಿದ್ಯಾರ್ಥಿನಿಯರ ತಂಡವನ್ನು ಅಂತಿಮ ಪಂದ್ಯಾಟದಲ್ಲಿ ಸೋಲಿಸಿ, ಮಡಿಕೇರಿ ತಾಲೂಕಿನ ವಿದ್ಯಾರ್ಥಿನಿಯರ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ಈ ಪಂದ್ಯಾಟಗಳಲ್ಲಿ ಭಾಗವಹಿಸಿದ್ದ ಶ್ರೀ ರಾಜೇಶ್ವರಿ ವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅನುಷಾ ಎಂ.ಜಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಮುಂದೆ ಬಾಗಲಕೋಟೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಪಂದ್ಯಾಟಗಳಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾಳೆ ಎಂದು ವಿದ್ಯಾಲಯದ ಪ್ರಾಂಶುಪಾಲ ಪಿ.ಕೆ. ಮಂದಣ್ಣ ತಿಳಿಸಿದ್ದಾರೆ.