ಮಡಿಕೇರಿ, ಅ. ೨೨: ರೂ. ೨ ಕೋಟಿ ವೆಚ್ಚದಲ್ಲಿ ನಗರದ ಗಾಂಧಿ ಮೈದಾನದಲ್ಲಿ ಸುಸಜ್ಜಿತ ವ್ಯವಸ್ಥೆಗಳುಳ್ಳ ರಂಗಮAದಿರ ನಿರ್ಮಾಣಕ್ಕೆ ಜಿಲ್ಲಾಧಿಕಾರಿ, ನಗರಸಭೆ ಆಡಳಿತಾಧಿಕಾರಿ ವೆಂಕಟ್ ರಾಜಾ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ನಗರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚೆಗಳು ನಡೆದು ಸರ್ವ ಸದಸ್ಯರು ಸಹಮತ ವ್ಯಕ್ತಪಡಿಸಿ ಯೋಜನೆಗೆ ಅನುಮೋದನೆ ನೀಡಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ವಿಷಯ ಪ್ರಸ್ತಾಪಿಸಿ, ಮಡಿಕೇರಿ ದಸರಾ ಜನೋತ್ಸವ ಯಶಸ್ವಿಯಾಗಿ ನಡೆದಿದೆ. ಇದು ಎಲ್ಲರ ಸಹಕಾರದಿಂದ ಸಾಧ್ಯವಾಗಿದ್ದು, ಮಡಿಕೇರಿ ದಸರಾ ಕೇವಲ ಸಮಿತಿ ಸದಸ್ಯರ ದಸರಾವಲ್ಲ. ನಾಗರಿಕರು ಸೇರಿ ಆಚರಿಸುವ ಜನೋತ್ಸವವಾಗಿದೆ. ಈ ಹಿನ್ನೆಲೆ ಮುಂದಿನ ವರ್ಷ ದಸರಾಕ್ಕೆ ಈಗಿನಿಂದಲೇ ಚಟುವಟಿಕೆಗಳನ್ನು ನಡೆಸಬೇಕು. ಪ್ರತಿ ದಸರಾದಲ್ಲಿ ವೇದಿಕೆ ನಿರ್ಮಾಣಕ್ಕೆ ಹೆಚ್ಚಿನ ಮೊತ್ತ ತಗಲುವ ಹಿನ್ನೆಲೆ ಶಾಶ್ವತ ವೇದಿಕೆ ನಿರ್ಮಾಣಕ್ಕೆ ಕಾರ್ಯಯೋಜನೆ ಕೈಗೆತ್ತಿಕೊಳ್ಳಲಾಗಿದೆ. ನಗರಸಭೆಯ ‘ಎಂಟರ್ಪ್ರೆöÊಸ್’ ನಿಧಿಯಲ್ಲ್ಲಿ ರೂ. ೭.೩೩ ಕೋಟಿ ಅನುದಾನವಿದ್ದು, ಈ ಪೈಕಿ ರೂ. ೨ ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ರಂಗ ಮಂದಿರವನ್ನು ನಿರ್ಮಾಣ ಮಾಡಲಾಗುವುದು. ಇದರಲ್ಲಿ ೨೧.೨೦x೧೨.೦ ಮೀಟರ್ ವಿಸ್ತೀರ್ಣ ಇರಲಿದ್ದು, ಶೌಚಾಲಯವಿರುವ ೨ ಗ್ರೀನ್ ರೂಂ, ೨ ಡ್ರೆಸ್ಸಿಂಗ್ ರೂಂಗಳು ಒಳಗೊಂಡಿರುತ್ತವೆ. ಜೊತೆಗೆ ವೇದಿಕೆ ಬದಿ ಗ್ಯಾಲರಿಯನ್ನು ನಿರ್ಮಿಸಲಾಗುವುದು ಎಂದು ಮಾಹಿತಿ ಒದಗಿಸಿದರು.
ಪಾರ್ಕಿಂಗ್ ವ್ಯವಸ್ಥೆ - ಸಾರ್ವಜನಿಕ ಶೌಚಾಲಯ ನಿರ್ಮಾಣ
ಗಾಂಧಿ ಮೈದಾನದ ವೇದಿಕೆ ಹಿಂಭಾಗದಲ್ಲಿ ಪಾವತಿಸಿ, ಉಪಯೋಗಿಸುವ ಶೌಚಾಲಯ ಹಾಗೂ ಮೈದಾನದಲ್ಲಿ ವ್ಯವಸ್ಥಿತ ವಾಹನ ನಿಲುಗಡೆಯೂ ಇದೇ ಯೋಜನೆಯಲ್ಲಿ ಸೇರಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ವಿವರಿಸಿದರು.
ವೇದಿಕೆ ಕೇವಲ ದಸರಾಕ್ಕೆ ಸೀಮಿತವಾಗದೆ ರಾಜಕೀಯ, ಸಂಘ, ಸಂಸ್ಥೆಗಳ ಕಾರ್ಯಕ್ರಮಕ್ಕೆ ನಿಗದಿತ ದರದಲ್ಲಿ ನೀಡಬಹುದಾಗಿದೆ. ಇದರಿಂದ ನಗರಸಭೆಗೆ ಆದಾಯ ಸೃಷ್ಟಿಯಾದಂತಾಗುತ್ತದೆ. ಆ ಮೂಲಕ ನಿರ್ವಹಣೆ ಸುಲಭ ಸಾಧ್ಯವಾಗುತ್ತದೆ. ರಾಜಾಸೀಟ್ ವ್ಯಾಪ್ತಿಯಲ್ಲಿ ಸಾರ್ವಜನಿಕರು, ಪ್ರವಾಸಿಗರ ಓಡಾಟದೊಂದಿಗೆ ವಾಹನ ದಟ್ಟಣೆಯೂ ಹೆಚ್ಚಿರುವ ಹಿನ್ನೆಲೆ ಶೌಚಾಲಯ ಹಾಗೂ ಪಾರ್ಕಿಂಗ್ ಬೇಡಿಕೆ ಇದೆ ಎಂದು ಹೇಳಿದರು.
ರೂಪಿಸಿದ ಯೋಜನೆ ಅಂತಿಮವಲ್ಲ, ಸದಸ್ಯರ ಸಲಹೆಗಳನ್ನು ಸ್ವೀಕರಿಸಿ ಬದಲಾವಣೆಗೆ ಅವಕಾಶವಿದೆ. ಮುಂದಿನ ದಿನಗಳಲ್ಲಿ ಇದು ಸಾಂಸ್ಕೃತಿಕ ಕೇಂದ್ರವಾಗಿ ಬದಲಾಗುವ ನಿರೀಕ್ಷೆ ಇದೆ.
(ಮೊದಲ ಪುಟದಿಂದ) ಸ್ಥಳೀಯ ಕಲಾವಿದರ ಕಲೆ ಪ್ರದರ್ಶನಕ್ಕೂ ವೇದಿಕೆಯಾಗಬಹುದಾಗಿದೆ ಎಂದರು.
ಸದಸ್ಯರ ಸಹಮತ
ಎಲ್ಲಾ ವ್ಯವಸ್ಥೆಗಳಿರುವ ವೇದಿಕೆ ಹಾಗೂ ಶೌಚಾಲಯ, ಪಾರ್ಕಿಂಗ್ ನಿರ್ಮಾಣಕ್ಕೆ ನಗರಸಭೆಯ ಸದಸ್ಯರು ಸಹಮತ ವ್ಯಕ್ತಪಡಿಸಿ ಯೋಜನೆಗೆ ಅನುಮೋದನೆ ನೀಡಿ ಕೆಲವೊಂದು ಸಲಹೆ ನೀಡಿದರು.
ಸದಸ್ಯ ಉಮೇಶ್ ಸುಬ್ರಮಣಿ ಮಾತನಾಡಿ, ದಸರಾ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆದಿದೆ. ಹಿಂದಿನ ಶಾಸಕ ಅಪ್ಪಚ್ಚು ರಂಜನ್ ಅವರು ಗಾಂಧಿ ಮೈದಾನದಲ್ಲಿ ಮೇಲ್ಛಾವಣಿ ಅಳವಡಿಸಲು ರೂ. ೭೫ ಲಕ್ಷ ಅನುದಾನ ಒದಗಿಸಿದ್ದರು. ಇದೀಗ ವೇದಿಕೆ ನಿರ್ಮಾಣ ಮೂಲಕ ದೂರದೃಷ್ಟಿ ಯೋಜನೆ ಕೈಗೆತ್ತಿಕೊಂಡಿರುವುದು ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ವೇದಿಕೆ ಬಳಸಿಕೊಳ್ಳಲು ದರ ನಿಗದಿ ಮಾಡುವುದರಿಂದ ನಗರಸಭೆಗೆ ಆದಾಯ ಬರುತ್ತದೆ ಎಂದರು.
ಅರುಣ್ ಶೆಟ್ಟಿ ಮಾತನಾಡಿ, ಪ್ರತಿ ವರ್ಷ ವೇದಿಕೆ ನಿರ್ಮಾಣಕ್ಕೆ ರೂ. ೩೫ ಲಕ್ಷ ವ್ಯಯವಾಗುತ್ತದೆ. ಈ ಯೋಜನೆಯಿಂದ ಹಣ ಉಳಿತಾಯವಾಗುತ್ತದೆ. ಕಾಮಗಾರಿ ಗುಣಮಟ್ಟದೊಂದಿಗೆ ವ್ಯವಸ್ಥಿತವಾಗಿರಬೇಕೆಂದು ಹೇಳಿದರು.
ನೆರವಂಡ ಅನಿತಾ ಪೂವಯ್ಯ ಮಾತನಾಡಿ, ಈಗಾಗಲೇ ನಿರ್ಮಾಣಗೊಂಡಿರುವ ಮೇಲ್ಛಾವಣಿಯನ್ನು ಪ್ರವೇಶ ದ್ವಾರದ ತನಕ ವಿಸ್ತರಿಸಿದರೆ ಉತ್ತಮವಾಗಿರುತ್ತದೆ. ಪ್ರತಿವರ್ಷ ದಸರಾ ಸಂದರ್ಭ ಮೇಲ್ಛಾವಣಿಯನ್ನು ಹೆಚ್ಚುವರಿಯಾಗಿ ಅಳವಡಿಸಲಾಗುತ್ತದೆ. ಇದನ್ನು ಶಾಶ್ವತವಾಗಿ ನಿರ್ಮಿಸುವುದರಿಂದ ದಸರಾ ಸಮಯದಲ್ಲಿ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಗಾಂಧಿ ಮೈದಾನದ ಬದಿಯಲ್ಲಿರುವ ಗುಡ್ಡವನ್ನು ತೆರವುಗೊಳಿಸಿ ಅಲ್ಲಿಯೂ ಪಾರ್ಕಿಂಗ್ಗೆ ಅವಕಾಶ ನೀಡಬಹುದಾಗಿದೆ ಎಂದು ಸಲಹೆ ನೀಡಿದರು.
ಕೆ.ಎಸ್. ರಮೇಶ್ ಮಾತನಾಡಿ, ನಗರಸಭೆಯ ‘ಎಂಟರ್ಪೈಸ್’ ನಿಧಿಯಲ್ಲಿ ಅನುದಾನ ಇರುವ ಹಿನ್ನೆಲೆ ಅದನ್ನು ಬಳಸಿಕೊಂಡು ಪಾರ್ಕಿಂಗ್ ಜಾಗದ ತನಕವೂ ಮೇಲ್ಛಾವಣಿ ನಿರ್ಮಿಸಿದರೆ ಉತ್ತಮವಾಗಿರುತ್ತದೆ ಎಂದು ಸಲಹೆ ನೀಡಿದರು.
ನಾಮನಿರ್ದೇಶಿತ ಸದಸ್ಯ ಯಾಕೂಬ್ ಮಾತನಾಡಿ, ವೇದಿಕೆ ನಿರ್ಮಾಣವಾಗಿ ಹಗಲಿನ ವೇಳೆ ಕಾರ್ಯಕ್ರಮ ನಡೆದರೆ ಪಕ್ಕದಲ್ಲಿ ಶಾಲೆ ಇರುವ ಕಾರಣದಿಂದ ವಿಧ್ಯಾಭ್ಯಾಸಕ್ಕೆ ತೊಡಕಾಗುವ ಸಾಧ್ಯತೆ ಇದೆ ಎಂದು ಗಮನ ಸೆಳೆದರು.
ಅನುದಾನ ಬಿಡುಗಡೆಗೊಳಿಸಲು ಬೇಡಿಕೆ
ನಗರೋತ್ಥಾನ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಹಣವನ್ನು ಗುತ್ತಿಗೆದಾರರಿಗೆ ಬಿಡುಗಡೆಗೊಳಿಸುವಂತೆ ಸದಸ್ಯರು ಸಭೆಯಲ್ಲಿ ಬೇಡಿಕೆ ಇಟ್ಟರು.
ಇದಕ್ಕೆ ಉತ್ತರಿಸಿದ ವೆಂಕಟ್ ರಾಜಾ ಅವರು, ಪೂರ್ಣಗೊಂಡ ಕಾಮಗಾರಿಯ ಹಣವನ್ನು ತಕ್ಷಣ ಬಿಡುಗಡೆಗೊಳಿಸಲಾಗಿದೆ. ಅಪೂರ್ಣ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಉತ್ತರಿಸಿದರು.
ಸದಸ್ಯ ಮನ್ಸೂರ್ ಅಲಿ ಮಾತನಾಡಿ, ಶೇ ೨೫ ರ ಯೋಜನೆಯಡಿ ನಗರದಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ. ಇದರಲ್ಲಿ ಅಧಿಕಾರಿಗಳ ಲೋಪವಿರುವ ಅನುಮಾನವಿದೆ. ಈ ಬಗ್ಗೆ ತನಿಖೆಯಾಗಬೇಕೆಂದು ಒತ್ತಾಯಿಸಿದರು.
ಅಮೀನ್ ಮೊಹಿಸಿನ್ ಮಾತನಾಡಿ, ಕಾಮಗಾರಿ ವಿಳಂಬದ ಬಗ್ಗೆ ಜನರಲ್ಲಿ ಅಸಮಾಧಾನವಿದ್ದು, ಜನಪ್ರತಿನಿಧಿಗಳು ಹಾಗೂ ನಗರಸಭೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಮಗಾರಿಗಳಿಗೆ ವೇಗ ನೀಡಬೇಕೆಂದರು.
ಸವಿತಾ ರಾಕೇಶ್ ಮಾತನಾಡಿ, ಬನ್ನಿ ಮಂಟಪದಿAದ ಚೌಕಿ ತನಕ ತ್ವರಿತವಾಗಿ ರಸ್ತೆಯನ್ನು ಮರುಡಾಂಬರೀಕರಣಗೊಳಿಸಬೇಕೆAದರು.
ಸಾಯಿ ಮೈದಾನ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ
ಸಾಯಿ ಮೈದಾನ ಬಳಿ ರಸ್ತೆಯನ್ನು ಶೀಘ್ರ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸುವಂತೆ ಸದಸ್ಯರು ಜಿಲ್ಲಾಧಿಕಾರಿಯಲ್ಲಿ ಮನವಿ ಮಾಡಿದರು.
ಸದಸ್ಯ ಮಹೇಶ್ ಜೈನಿ ಹಾಗೂ ಕಾಳಚಂಡ ಅಪ್ಪಣ್ಣ ಮಾತನಾಡಿ, ವಾಹನಗಳು ಸುತ್ತಿ ಬಳಸಿ ಓಡಾಡಬೇಕಾದ ಪರಿಸ್ಥಿತಿ ತಲೆದೋರಿದ್ದು, ಏಕಮುಖ ಸಂಚಾರಕ್ಕಾದರೂ ಸಾಯಿ ಮೈದಾನ ಪಕ್ಕದ ರಸ್ತೆಯಲ್ಲಿ ಅವಕಾಶ ನೀಡಬೇಕು ಎಂದರು.
ಮಳೆಯಿಂದ ಕೆಲಸ ವಿಳಂಬವಾಯಿತು. ಜನರ ಸುರಕ್ಷೆ ದೃಷ್ಟಿಯಲ್ಲಿ ಸಂಚಾರ ನಿರ್ಬಂಧ ಮಾಡಲಾಗಿದೆ. ವಾಹನ ಓಡಾಟದಿಂದ ಬಿರುಕು ಹೆಚ್ಚಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲಾಸ್ಪತ್ರೆ ರಸ್ತೆ ಸಮೀಪದಲ್ಲಿ ಜೆಸಿಬಿ, ಹಿಟಾಚಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದ್ದು, ಇದರಿಂದ ತೊಂದರೆಯಾಗುತ್ತಿದೆ. ಅಲ್ಲಿ ನಿಲುಗಡೆಗೆ ಅವಕಾಶ ನೀಡಬಾರದು, ಕಡ್ಡಾಯವಾಗಿ ನಗರದಲ್ಲಿ ಕನ್ನಡ ನಾಮಫಲಕಗಳನ್ನು ಅಳವಡಿಸಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ತಿಳಿಸಿದರು. ಸದಸ್ಯರು ಕೂಡ ಇದಕ್ಕೆ ಒಪ್ಪಿಗೆ ನೀಡಿದರು.
ತಾಂತ್ರಿಕ ತೊಂದರೆ ಪರಿಹಾರಕ್ಕೆ ಕ್ರಮ
ನಮೂನೆ-೪, ಖಾತೆ ಸೇರಿದಂತೆ ದಾಖಲೆಗಳನ್ನು ಪಡೆಯಲು ತಲೆದೋರಿರುವ ತಾಂತ್ರಿಕ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.
ಸದಸ್ಯ ಅಮೀನ್ ಮೊಹಿಸಿನ್ ಈ ವಿಷಯ ಪ್ರಸ್ತಾಪಿಸಿ, ಖಾತೆಗಳನ್ನು ನೀಡುವ ಸಂದರ್ಭ ಅದರಲ್ಲಿ ಜಾಗದ ಉದ್ದ, ಅಗಲವನ್ನು ನಮೂದಿಸದ ಕಾರಣದಿಂದಾಗಿ ಇಂದು ತೊಂದರೆ ಎದುರಾಗಿದೆ. ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಆಡಳಿತಾತ್ಮಕ ಕೆಲಸಗಳು ಜಾಗದ ವಿಷಯದಲ್ಲಿ ನಡೆಯುತ್ತಿಲ್ಲ ಎಂದು ಗಮನ ಸೆಳೆದರು.
ಈ ಹಿಂದೆಯೂ ಈ ಕುರಿತು ಅಧಿಕಾರಿಗಳ ಸಭೆ ನಡೆಸಿದ್ದೇನೆ. ಇದರ ಮರುನೋಂದಣಿಗೆ ವಿಶೇಷ ಅನುಮತಿಯನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಆಶ್ವಾಸನೆಯಿತ್ತರು.
ಯಾಕೂಬ್ ಮಾತನಾಡಿ, ಮಾಂಸ ಮಾರುಕಟ್ಟೆ ನಿರ್ಮಾಣಕ್ಕೆ ಅಳವಡಿಸಿರುವ ಶೆಡ್ ಜಾಗದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಇದರಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ಸಮಸ್ಯೆ ಉಂಟಾಗುತ್ತದೆ ಎಂದರು. ಪೌರಾಯುಕ್ತ ರಮೇಶ್ ಸಭೆಯಲ್ಲಿದ್ದರು.