ಮಡಿಕೇರಿ, ಅ. ೧೯: ತೋಟಗಳಲ್ಲಿ ದುಡಿಯುವ ಕಾರ್ಮಿಕರನ್ನು ಗೌರವಿಸುವುದು ಸಮಾಜದ ಕರ್ತವ್ಯ ವಾಗಬೇಕು ಎಂದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ ಅಭಿಪ್ರಾಯಪಟ್ಟಿದ್ದಾರೆ.

ಬಿಳಿಗೇರಿಯ ಟಾಟಾ ಕಾಫಿ ಸಂಸ್ಥೆಯಲ್ಲಿ ಕಳೆದ ೩೬ ವರ್ಷಗಳಿಂದ ಕಾರ್ಯನಿರ್ವಹಿಸಿ ನಿವೃತ್ತರಾದ ಕಾರ್ಮಿಕ ಮಹಿಳೆ ಎ.ಯಶೋಧ ಅವರನ್ನು ಎಐಟಿಯುಸಿ ಸಂಘಟನೆ ವತಿಯಿಂದ ಬೀಳ್ಕೊಡಲಾಯಿತು. ಬಿಳಿಗೇರಿಯ ಟಾಟಾ ಕಾಫಿ ತೋಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಹೆಚ್.ಎಂ.ಸೋಮಪ್ಪ ಅವರು ಕಾರ್ಮಿಕರನ್ನು ಕೇವಲ ದುಡಿಸಿ ಕೊಳ್ಳುವುದಕ್ಕೆ ಮಾತ್ರ ಸೀಮಿತಗೊಳಿಸ ಬಾರದು. ಅವರ ಎಲ್ಲಾ ಸಂಕಷ್ಟಗಳಿಗೆ ಸ್ಪಂದಿಸಿ ನಿವೃತ್ತಿ ಹೊಂದುವಾಗ ಗೌರವದಿಂದ ಕಳುಹಿಸಿಕೊಡಬೇಕು ಎಂದರು. ಹಿರಿಯರಾದ ನಾರಾಯಣ, ಸಂಜೀವ, ಕಾರ್ಮಿಕ ಮುಖಂಡರಾದ ಗಣೇಶ್, ಲೋಕೇಶ್, ಸೂರ್ಯ, ಮನವಿ ವೇಲಮ್ಮ, ಗಿರಿಜಾ, ಮುತ್ತಜ್ಜಿ ಮತ್ತಿತರ ಕಾರ್ಮಿಕರು ಉಪಸ್ಥಿತರಿದ್ದರು.