ವೀರಾಜಪೇಟೆ, ಅ. ೧೮: ಸುಗಮ ಸಂಗೀತ ೨೦ನೇ ಶತಮಾನದಲ್ಲಿ ಆರಂಭ ಗೊಂಡರೂ ಇಂದು ವಿಶ್ವವ್ಯಾಪಿಯಾಗಿ ಯುವವರ್ಗದಿಂದ ಮುಪ್ಪಿನಲ್ಲಿರುವ ವ್ಯಕ್ತಿಗಳಿಗೂ ಮುದನೀಡುವ ಸಂಗೀತ ಪ್ರಕಾರವಾಗಿದೆ. ಸುಗಮ ಸಂಗೀತವನ್ನು ಉಳಿಸಿ ಬೆಳಸಬೇಕು ಎಂದು ನಿವೃತ್ತ ವೈದ್ಯಾಧಿಕಾರಿ ಮತ್ತು ಖ್ಯಾತ ಗಝಲ್ ಕವಿಗಳಾದ ಡಾ. ಶ್ರೀ ಶೈಲ ಮಾದಣ್ಣವರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಣವ ಸಂಗೀತ ಶಾಲೆ ಬೆಂಗಳೂರು ಇವರ ಪ್ರಥಮ ವಾರ್ಷಿಕ ಸಂಭ್ರಮಾಚರಣೆ ಸಮಾರಂಭ ವೀರಾಜಪೇಟೆ ನಗರದ ಶ್ರೀ ರಾಜ ರಾಜೇಶ್ವರಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶ್ರೀಶೈಲ ಅವರು, ಪಾಶ್ಚಾತ್ಯ ಸಂಗೀತಕ್ಕೆ ಮಾರು ಹೋಗದೇ ನಾಡಿನ ದಿವ್ಯ ಪರಂಪರೆಯ ಸಂಸ್ಕೃತಿಗಳ ಭಾಗವಾದ ಕರ್ನಾಟಕ ಸಂಗೀತ, ಜಾನಪದ ಮತ್ತು ಸುಗಮ ಸಂಗೀತವನ್ನು ಅಭ್ಯಾಸ ಮಾಡಿ ಮುಂದಿನ ತಲೆಮಾರಿಗೂ ಪರಿಚಯಿಸುವ ಅಗತ್ಯವಿದೆ ಎಂದರು.

ಸಂಗೀತ ನಿರ್ದೇಶಕ, ಸುಗಮ ಸಂಗೀತ ಗಾಯಕ ಮೃತ್ಯುಂಜಯ ದೊಡ್ಡವಾಡ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿ, ಸುಗಮ ಸಂಗೀತ ತನ್ನದೆಯಾದ ರೀತಿಯಲ್ಲಿ ವಿಶ್ವವ್ಯಾಪಕವಾಗಿದೆ, ಜನಮನ್ನಣೆಯನ್ನು ಪಡೆದಿದೆ. ಜಾನಪದ ಸಾಹಿತ್ಯದ ಸೊಗಡಿನೊಂದಿಗೆ ಯುವ ಸಮುದಾಯ ಮತ್ತು ವೃದ್ಧರಿಗೂ ಮನಕ್ಕೆ ಹಿತ ನೀಡುತ್ತದೆ ಎಂದರು.

ಸುಗಮ ಸಂಗೀತ ಕಲಿಕೆಯ ಆಸಕ್ತಿ ಹೆಚ್ಚಬೇಕು, ಉಳಿಯಬೇಕು ಮತ್ತು ಬೆಳಸಬೇಕು. ಧೀಮಂತ ಭಾರತೀಯ ಸಂಸ್ಕೃತಿಯ ಕಲೆ, ಸಾಹಿತ್ಯ, ಪರಂಪರೆಯು ಮುಂದುವರೆಯಬೇಕು ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ವೀರಾಜಪೇಟೆ ಸಂತ ಅನ್ನಮ್ಮ ಶಾಲೆಯ ಚಿತ್ರಕಲಾ ಶಿಕ್ಷಕರಾದ ಕ್ಲಿಫರ್ಡ್ ಡಿಮೆಲ್ಲೊ ಅವರ ಕುಂಚದಿAದ ಮೂಲಕ ಶಿವನ ಕಲಾಚಿತ್ರ ಅನಾವರಣವಾಯಿತು.