ಸಿದ್ದಾಪುರ. ಅ.೧೮: ಗುಹ್ಯ ಸರ್ಕಾರಿ ಶಾಲೆಯ ಆವರಣದಲ್ಲಿ ಒಂಟಿ ಸಲಗ ದಾಂಧಲೆ ನಡೆಸಿದೆ. ಗುಹ್ಯ ಗ್ರಾಮಗಳ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಈ ಸಲಗವು ದಿನನಿತ್ಯ ಶಾಲೆಯ ಆವರಣದ ಸುತ್ತಮುತ್ತ ಓಡಾಡುತ್ತಿದ್ದು ಗುರುವಾರ ರಾತ್ರಿ ಶಾಲೆ ಆವರಣದೊಳಗೆ ನುಗ್ಗಿ ದಾಂಧಲೆ ನಡೆಸಿದೆ.

ಶಾಲೆಯ ಸಮೀಪದಲ್ಲಿರುವ ಜ್ಯೋತಿ ಪೊನ್ನಪ್ಪ ಎಂಬವರ ಕಾಫಿ ತೋಟದೊಳಗೆ ದಾಂಧಲೆ ನಡೆಸಿ ಫಸಲು ಇರುವ ಕಾಫಿ ಗಿಡಗಳನ್ನು ಧ್ವಂಸಗೊಳಿಸಿದೆ. ನಿರಂತರವಾಗಿ ಕಾಡಾನೆಗಳ ಹಾವಳಿಯಿಂದಾಗಿ ಬೆಳೆಗಾರರಿಗೆ ನೆಮ್ಮದಿ ಇಲ್ಲವೆಂದು ಸ್ಥಳೀಯ ಬೆಳೆಗಾರರು ತಿಳಿಸಿದ್ದಾರೆ.

ಶಾಲೆಯ ಆವರಣಕ್ಕೆ ಸಲಗ ನುಗ್ಗಿದ್ದು, ರಜೆ ಹಿನ್ನೆಲೆಯಲ್ಲಿ ಮಕ್ಕಳಿಗೆ ಯಾವುದೇ ತೊಂದರೆಗಳು ಸಂಭವಿಸಲಿಲ್ಲ. ಶಾಲೆಯ ಆವರಣದೊಳಗೆ ಪಂಚಾಯಿತಿ ವತಿಯಿಂದ ಆಟದ ಮೈದಾನ ನಿರ್ಮಾಣ ಮಾಡುವ ಬದಲು ಶಾಲೆಯ ಸುತ್ತಲು ಆವರಣ ಗೋಡೆಯನ್ನು ನಿರ್ಮಿಸಬೇಕೆಂದು ಹಾಗೂ ಶಾಲೆಯೊಳಗೆ ಕಾಡಾನೆಗಳು ಬರದಂತೆ ಅಗತ್ಯ ಕ್ರಮ ಕೈಗೊಳ್ಳಲು ಸಂಬAಧಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳಬೇಕೆಂದು ಸ್ಥಳದಾನಿಗಳು ಗ್ರಾಮ ಪಂಚಾಯಿತಿಯ ಅಧಿಕಾರಿಗಳನ್ನು ಹಾಗೂ ಮೇಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಕೂಡಲೇ ಮೈದಾನ ಕಾಮಗಾರಿಯನ್ನು ಸ್ಥಗಿತಗೊಳಿಸಿ ಶಾಲೆಯ ಸುತ್ತಲೂ ಆವರಣ ಗೋಡೆಯನ್ನು ನಿರ್ಮಾಣ ಮಾಡುವ ಮೂಲಕ ಮಕ್ಕಳ ಆತಂಕವನ್ನು ದೂರ ಮಾಡಬೇಕೆಂದು ಒತ್ತಾಯಿಸಿದ್ದಾರೆ.