ಕಣಿವೆ, ಅ. ೧೮: ಕುಶಾಲನಗರ ತಾಲೂಕು ಕೇಂದ್ರವಾಗಿ ಮಾರ್ಪಟ್ಟ ನಂತರ ಪಟ್ಟಣದ ಆಸುಪಾಸಿನ ಹಲವು ಬಡಾವಣೆಗಳಲ್ಲಿ ನಿವೇಶನಗಳ ‘ರೇಟು’ ಗಗನಮುಖಿಯಾಗಿದೆ.
ಅಂದರೆ ಜನಸಾಮಾನ್ಯರು, ಬಡವರು ಅತ್ತ ತಲೆನೂ ಹಾಕಲಾರದಷ್ಟು ಬೆಲೆ ದುಪ್ಪಟ್ಟಾಗಿದೆ. ಈಗಾಗಲೇ ಹಲವು ಬಡಾವಣೆಗಳಲ್ಲಿ ಇದ್ದಂತಹ ಖಾಲಿ ನಿವೇಶನಗಳನ್ನು ಬಹಳಷ್ಟು ಹಣವಂತ ಮಂದಿ ಖರೀದಿಸಿ ಮನೆಗಳನ್ನು ಕಟ್ಟಲು ಅಥವಾ ಮಾರಾಟ ಮಾಡಲು ಹಾಗೆಯೇ ಕಾಯ್ದಿರಿಸಿಕೊಂಡಿದ್ದಾರೆ.
ಕುಡಿಯುವ ಕಾವೇರಿ ನೀರಿನ ಸಂಪರ್ಕವಿಲ್ಲ
ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಡಾವಣೆಯೊಂದರಲ್ಲಿ ಸಾಕಷ್ಟು ನಿವೇಶನಗಳನ್ನು ಮಾರಾಟ ಮಾಡಲಾಗಿದೆ. ಆದರೆ ಇಲ್ಲಿ ನಿವೇಶನ ಖರೀದಿಸಿ ಮನೆ ಕಟ್ಟಿದ ಮಂದಿಗೆ ಕಾವೇರಿಯ ಕುಡಿಯುವ ನೀರಿನ ಸಂಪರ್ಕವನ್ನೇ ಬಡಾವಣೆಯ ಮಾಲೀಕ ಮಾಡಿಲ್ಲ.
ಇನ್ನೂ ಯುಜಿಡಿ ಸಂಪರ್ಕವೂ ಆಗಿಲ್ಲ. ಈ ಬಡಾವಣೆಯಲ್ಲಿ ನಿವೇಶನಗಳನ್ನು ಖರೀದಿಸಿರುವ ಮಂದಿ ಏಕಾದರೂ ಇಲ್ಲಿ ಖರೀದಿಸಿದೆ ಎಂದು ಗೊಣಗುತ್ತಿದ್ದಾರೆ.
ಪಟ್ಟಣದ ವ್ಯಾಪ್ತಿಯಲ್ಲಿರುವ ಜನವಸತಿ ಬಡಾವಣೆಗಳಲ್ಲಿ ಖಾಲಿ ಇರುವ ನಿವೇಶನಗಳಲ್ಲಿ ಆಳೆತ್ತರ ಹಾಗೂ ಅದಕ್ಕೂ ಆಚೆ ಬೆಳೆದಿರುವ ಕಾಡು ಗಿಡಗಳನ್ನು ಪಂಚಾಯಿತಿಯೇ ತೆರವುಗೊಳಿಸಬೇಕು.
ಹೀಗೆ ತೆರವು ಮಾಡಿಸುವ ಮೂಲಕ ಈಗಾಗಲೇ ಮನೆಗಳನ್ನು ಕಟ್ಟಿಕೊಂಡಿರುವ ಮಂದಿಗೆ ನೆಮ್ಮದಿಯುತ ವಾತಾವರಣ ಸೃಷ್ಟಿಸುವಲ್ಲಿ ಪಂಚಾಯಿತಿ ಆಡಳಿತ ಮುಂದಾಗಬೇಕಿದೆ ಎಂಬುದು ಅಲ್ಲಿನ ನಿವಾಸಿಗಳ ಆಗ್ರಹವಾಗಿದೆ.
- ಕೆ.ಎಸ್. ಮೂರ್ತಿ