ಕುಶಾಲನಗರ, ಅ. ೧೮: ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮತ್ತು ಅಖಿಲ ಭಾರತೀಯ ಸನ್ಯಾಸಿ ಸಂಘ ಆಶ್ರಯದಲ್ಲಿ ತಲಕಾವೇರಿ -ಪೂಂಪ್‌ಹಾರ್ ೧೪ನೇ ವರ್ಷದ ಕಾವೇರಿ ನದಿ ಜಾಗೃತಿ ಯಾತ್ರೆ ತಾ. ೨೦ ರಿಂದ ಒಂದು ತಿಂಗಳ ಕಾಲ ನಡೆಯಲಿದೆ.

ಸ್ವಚ್ಛ ಕಾವೇರಿ ಹಾಗೂ ಜಲ ಮೂಲಗಳ ಸಂರಕ್ಷಣೆ ಬಗ್ಗೆ ಜನರಿಗೆ ಅರಿವು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯಾತ್ರೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳ ಸಾಧು ಸಂತರು ಪಾಲ್ಗೊಳ್ಳಲಿದ್ದು, ತಾ. ೧೯ ರಂದು ತಂಡ ತಲಕಾವೇರಿಗೆ ಆಗಮಿಸಲಿದೆ.

ತಾ. ೨೦ ರಂದು ಬೆಳಿಗ್ಗೆ ಯಾತ್ರೆ ತಂಡ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿ ಕಲಶಗಳಲ್ಲಿ ಪವಿತ್ರ ಕಾವೇರಿ ತೀರ್ಥ ಸಂಗ್ರಹಿಸಿ ಬೆಳಿಗ್ಗೆ ೯ ಗಂಟೆಗೆ ವೀರಾಜಪೇಟೆ ಅರಮೇರಿ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ಯಾತ್ರೆಗೆ ಚಾಲನೆ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ಕಾವೇರಿ ಜಾಗೃತಿ ಯಾತ್ರೆಯ ಕರ್ನಾಟಕ ಮತ್ತು ತಮಿಳುನಾಡು ಪ್ರಾಂತದ ಸಂಚಾಲಕರು ಹಾಗೂ ಮಾರ್ಗದರ್ಶ ಕರಾದ ವೇ.ಬ್ರ. ಭಾನು ಪ್ರಕಾಶ್ ಶರ್ಮ, ಯಾತ್ರೆಯ ಸಂಸ್ಥಾಪಕ ಶ್ರೀ ಗಣೇಶ ಸ್ವರೂಪಾನಂದ ಗಿರಿ ಸ್ವಾಮೀಜಿ, ಅಖಿಲ ಭಾರತ ಸನ್ಯಾಸಿಗಳ ಸಂಘ ಸಂಸ್ಥಾಪಕ ಶ್ರೀ ರಮಾನಂದ ಸ್ವಾಮೀಜಿ, ಪ್ರಮುಖರಾದ ಅಖಿಲ ಭಾರತ ಸನ್ಯಾಸಿ ಸಂಘ ಪ್ರಮುಖರಾದ ವೇದಾಂತನAದ ಸ್ವಾಮೀಜಿ, ಆತ್ಮಾನಂದ ಸ್ವಾಮೀಜಿ, ಯಾತ್ರೆಯ ಸಂಚಾಲಕ ಆದಿತ್ಯಾನಂದ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ ೧೧ ಗಂಟೆಗೆ ಸಾಧು-ಸಂತರ ತಂಡ ಭಾಗಮಂಡಲ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಸಂಗಮದಲ್ಲಿ ಕಾವೇರಿ ನದಿಗೆ ಮಹಾ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದಾರೆ. ಸಂಜೆ ೪ ಗಂಟೆಗೆ ಕುಶಾಲನಗರಕ್ಕೆ ಆಗಮಿಸುವ ಸಾಧು-ಸಂತರ ತಂಡ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕಾವೇರಿ ಆರತಿ ಕ್ಷೇತ್ರದಲ್ಲಿ ೧೬೫ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಂದು ಸಾಧು-ಸಂತರು ಕುಶಾಲನಗರದಲ್ಲಿ ವಾಸ್ತವ್ಯ ಹೂಡಲಿದ್ದು, ಮರುದಿನ ಬೆಳಿಗ್ಗೆ ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯದ ಬಳಿ ಕಾವೇರಿ ನದಿಗೆ ಮಹಾ ಆರತಿ ಕಾರ್ಯಕ್ರಮ ನಂತರ ಜಿಲ್ಲೆಯಿಂದ ಕೊಣನೂರು ಮೂಲಕ ರಾಮನಾಥಪುರ ಕಡೆಗೆ ಸಾಗಲಿದ್ದಾರೆ ಎಂದು ಚಂದ್ರಮೋಹನ್ ಮಾಹಿತಿ ನೀಡಿದ್ದಾರೆ.

ನಂತರ ತಂಡ ಶ್ರೀರಂಗಪಟ್ಟಣ ಬೆಂಗಳೂರು ಮಾರ್ಗವಾಗಿ ನಂತರ ಹೊಗೆನಕಲ್ ಮೂಲಕ ತಮಿಳು ನಾಡಿನತ್ತ ಸಾಗಿ ನವೆಂಬರ್ ೧೩ ರಂದು ತಮಿಳುನಾಡಿನ ಪೂಂಪ್ ಹಾರ್ ಬಳಿ ಕಾವೇರಿ ನದಿ ಬಂಗಾಳಕೊಲ್ಲಿ ಸಮುದ್ರ ಸಂಗಮದಲ್ಲಿ ತಲಕಾವೇರಿ ಕ್ಷೇತ್ರದಿಂದ ಕಲಶಗಳಲ್ಲಿ ಒಯ್ಯುವ ಪವಿತ್ರ ಕಾವೇರಿ ತೀರ್ಥವನ್ನು ವಿಶೇಷ ಪೂಜೆ ಸಲ್ಲಿಸಿ ವಿಸರ್ಜಿಸುವ ಮೂಲಕ ಯಾತ್ರೆಗೆ ಸಮಾರೋಪ ನಡೆಯುವುದು ಎಂದು ಚಂದ್ರಮೋಹನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.