ಚೆಯ್ಯಂಡಾಣೆ, ಅ. ೧೮: ನಾಪೋಕ್ಲುವಿನ ಇಂದಿರಾ ನಗರದಲ್ಲಿ ರೂ. ೧೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿವೇಕಾನಂದ ಸಂಘದ ಸಮುದಾಯ ಭವನ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭ ವಿವೇಕಾನಂದ ಸಂಘದ ಕೋಶಾಧಿಕಾರಿ ಜಲೇಂದ್ರ ಮಾತನಾಡಿ, ಕಳೆದ ವರ್ಷ ಶಾಸಕ ಪೊನ್ನಣ್ಣ ಅವರಲ್ಲಿ ಸಮುದಾಯ ಭವನ ನಿರ್ಮಿಸಿ ಕೊಡಬೇಕೆಂದು ಮನವಿ ಸಲ್ಲಿಸಿದ್ದೆವು. ಇದಕ್ಕೆ ಸ್ಪಂದಿಸಿದ ಶಾಸಕರು ೧೦ ಲಕ್ಷ ರೂ ಅನುದಾನವನ್ನು ನೀಡಿ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜಿ ನೆರವೇರಿಸಿದ್ದಾರೆ ಎಂದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಉಪಾಧ್ಯಕ್ಷೆ ಕುಲ್ಲೇಟಿರ ಹೇಮಾವತಿ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಗ್ರಾ.ಪಂ. ಪಂಚಾಯಿತಿ ಸದಸ್ಯರಾದ ಅರುಣ್ ಬೇಬ, ಸಾಬ ತಿಮ್ಮಯ್ಯ, ಕೆಡಿಪಿ ಸದಸ್ಯ ಅಬ್ದುಲ್ ರೆಹಮಾನ್, ವಿವೇಕಾನಂದ ಸಂಘದ ಉಪಾಧ್ಯಕ್ಷ ಶಶಿ ಸೇರಿದಂತೆ ಸಂಘದ ಸದಸ್ಯರು, ಪಕ್ಷದ ಪ್ರಮುಖರು ಹಾಜರಿದ್ದರು. ಪೂಜಾ ವಿಧಿ ವಿಧಾನಗಳನ್ನು ಅರ್ಚಕರಾದ ಮಕ್ಕಿ ದಿವಾಕರ್ ಅವರು ನೆರವೇರಿಸಿದರು.

ಬಳಿಕ ನಾಪೋಕ್ಲು ಬಳಿಯ ಪಾರಾಣೆ ಕೊಣಂಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಕಾಡು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಆಟದ ಮೈದಾನದ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಪೊನ್ನಣ್ಣ ಕಾಮಗಾರಿಯ ಪ್ರಗತಿಯನ್ನು ವೀಕ್ಷಿಸಿದರಲ್ಲದೆ ಮೈದಾನದ ಮುಂದಿನ ರೂಪುರೇಷೆಗಳ ಬಗ್ಗೆ ಚರ್ಚಿಸಿ ಸಲಹೆ, ಮಾರ್ಗದರ್ಶನವನ್ನು ನೀಡಿದರು.

ಈ ಸಂದರ್ಭ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಬೊಳ್ಳಂಡ ಶರಿನ್, ಪಕ್ಷದ ಪ್ರಮುಖರಾದ ಕಲಿಯಂಡ ಸಂಪನ್ ಅಯ್ಯಪ್ಪ, ಬೊಳ್ಳಂಡ ರೋಷನ್ ಸೇರಿದಂತೆ ಗ್ರಾಮದ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.