ಮುಳ್ಳೂರು, ಅ. ೮: ‘ಅಕ್ಷರಭ್ಯಾಸ ಕಲಿಸಿದ ಗುರುಗಳು ಸದಾ ಮಕ್ಕಳ ಶ್ರೇಯಸನ್ನು ಬಯಸುತ್ತಾರೆ’ ಎಂದು ಹಿರಿಯ ನಿವೃತ್ತ ಶಿಕ್ಷಕ ಡಿ.ಬಿ. ಸೋಮಪ್ಪ ಮಾಸ್ತರ್ ಅಭಿಪ್ರಾಯ ಪಟ್ಟರು. ಅವರು ಸಮೀಪದ ನಿಡ್ತ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಿಡ್ತ ಶಾಲೆಯ ೧೯೮೮-೮೯ನೇ ಶೈಕ್ಷಣಿಕ ವರ್ಷದ ೭ನೇ ತರಗತಿಯ ಪೂರ್ವ ಹಳೆಯ ವಿದ್ಯಾರ್ಥಿಗಳ ಮಹಾ ಸಂಗಮದ ವತಿಯಿಂದ ಹಮ್ಮಿಕೊಂಡಿದ್ದ ನಿವೃತ್ತ ಶಿಕ್ಷಕರಿಗೆ ಸನ್ಮಾನ ಗುರುವಂದನಾ ಕಾರ್ಯಕ್ರಮದಲ್ಲಿ ಗುರುವಂದನೆ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಶಿಷ್ಯರ ಏಳಿಗೆಯನ್ನು ಕಾಣುವ ಗುರುಗಳು ಸಾರ್ಥಕತೆಯನ್ನು ಕಾಣುತ್ತಾರೆ ಈ ದಿಸೆಯಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪೂರೈಸಿದ ನಂತರ ಗುರುಗಳು ಹೇಳಿಕೊಟ್ಟ ಮಾರ್ಗವನ್ನು ಅನುಸರಿಸಿದರೆ ಜೀವನದಲ್ಲಿ ಏಳಿಗೆಯನ್ನು ಕಾಣಬಹುದು ಎಂದರು.
ಗುರುವಂದನೆ ಸ್ವೀಕರಿಸಿದ ಮತ್ತೊಬ್ಬ ಹಿರಿಯ ನಿವೃತ್ತ ಶಿಕ್ಷಕಿ ಸ್ವಾತಿ ಮಾತನಾಡಿ-ಹಳೆಯ ವಿದ್ಯಾರ್ಥಿಗಳು ತಮಗೆ ಕಲಿಸಿದ ಗುರುಗಳಿಗೆ ಗುರುವಂದನೆ ಸಲ್ಲಿಸುವ ಕಾರ್ಯಕ್ರಮವು ಜೀವನದ ಸ್ಮರಣೀಯ ಭಾಗವಾಗುತ್ತದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪಿಸುವಂತೆ ಸಲಹೆ ನೀಡಿದರು.
ಶನಿವಾರಸಂತೆ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್ ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಾಹಿತಿ ತಂತ್ರಜ್ಞಾನವನ್ನು ಒಳಗೊಂಡಿದೆ ಆದರೆ ಶಿಕ್ಷಣ, ಸಂಸ್ಕಾರ ಕಲಿಸುವ ಹಾಗೂ ವಿದ್ಯಾರ್ಥಿಗಳನ್ನು ಸರಿದಾರಿಗೆ ತರುವ ಜವಾಬ್ದಾರಿ ಗುರುಗಳ ಮೇಲಿದೆ ಎಂದರು.
ನಿವೃತ್ತ ಶಿಕ್ಷಕ ಷಣ್ಮುಖಯ್ಯ ಮಾಸ್ತರ್ ಸೇರಿದಂತೆ ಸದರಿ ಶಾಲೆಯಲ್ಲಿ ಪಾಠ ಮಾಡಿದ ದಿವಂಗತರಾಗಿರುವ ಶಿಕ್ಷಕರ ಪತ್ನಿಯರಾದ ಗಾಯತ್ರಿ ಶ್ರೀಪತಿ, ಅಕ್ಕಮ್ಮ ಶಾಂತಪ್ಪ, ವನಜಾಕ್ಷಿ ಗಣಪಯ್ಯ, ತಂಗಮ್ಮ ಮುತ್ತಪ್ಪ ಹಾಗೂ ದಿವಂಗತ ಶಿಕ್ಷಕರ ಪುತ್ರರಾದ ಎಂ.ಎಸ್. ಸುದರ್ಶನ್ ಮತ್ತು ಕೆ.ಎಸ್. ಕಿರಣ್ ಇವರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಳೆ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಈ ಹಳೆಯ ವಿದ್ಯಾರ್ಥಿಗಳ ಪರವಾಗಿ ಹಳೆ ವಿದ್ಯಾರ್ಥಿ ಸಂಗಮದ ಅಧ್ಯಕ್ಷ ಜಯಕುಮಾರ್ ಮಾತನಾಡಿದರು, ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ಪಿ.ಕೆ. ರತ್ನ, ಎಸ್ಡಿಎಂಸಿ ಅಧ್ಯಕ್ಷೆ ನೇತ್ರಾವತಿ, ಹಳೆ ವಿದ್ಯಾರ್ಥಿ ಸಂಗಮದ ಪದಾಧಿಕಾರಿಗಳು, ಸದಸ್ಯರು ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.