ಮಡಿಕೇರಿ, ಅ. ೫: ಭಾರತೀಯ ಜನತಾ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ದೇಶವ್ಯಾಪಿ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ೧೦ ಕೋಟಿ ಗುರಿ ಪೈಕಿ ಈಗಾಗಲೇ ೮ ಕೋಟಿ ಸದಸ್ಯತ್ವ ನೋಂದಣಿ ಮಾಡಲಾಗಿದೆ. ಇನ್ನುಳಿದ ದಿನಗಳಲ್ಲಿ ನಿರ್ದಿಷ್ಟ ಗುರಿಯನ್ನು ಮುಟ್ಟಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ, ಅಭಿಯಾನದ ರಾಜ್ಯ ಸಹಸಂಚಾಲಕ ಪ್ರತಾಪ್ ಸಿಂಹ ನಾಯಕ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ತಿಂಗಳಿನಿAದ ಸದಸ್ಯತ್ವ ಅಭಿಯಾನ ತಂತ್ರಜ್ಞಾನ ಬಳಸಿಕೊಂಡು ನಡೆಸಲಾಗುತ್ತಿದೆ. ೨೦೧೪ರಲ್ಲಿ ‘ಮಿಸ್ ಕಾಲ್’ ನೀಡುವುದರೊಂದಿಗೆ ಸದಸ್ಯತ್ವ ಪಡೆಯಲು ಅವಕಾಶ ನೀಡಲಾಗಿತ್ತು. ೨೦೧೯ರಲ್ಲಿಯೂ ೬ ಕೋಟಿ ಸದಸ್ಯತ್ವ ವನ್ನು ಪಕ್ಷ ಹೊಂದಿ ಪ್ರಪಂಚದಲ್ಲಿಯೇ ಅತೀ ದೊಡ್ಡ ರಾಜಕೀಯ ಸಂಘಟನೆಯಾಗಿ ಹೊರಹೊಮ್ಮಿತ್ತು. ೨೦೨೪ರಲ್ಲಿ ೧೦ ಕೋಟಿ ಸದಸ್ಯತ್ವದ ಗುರಿ ಹೊಂದಲಾಗಿತ್ತು. ಈಗಾಗಲೇ ೮ ಕೋಟಿ ಸದಸ್ಯರು ನೋಂದಣಿಗೊAಡಿದ್ದಾರೆ. ತಾ. ೨ ರಿಂದ ೧೫ರ ತನಕ ೨ನೇ ಹಂತದ ಅಭಿಯಾನ ಕೈಗೊಂಡಿದ್ದು, ಈ ಅವಧಿಯಲ್ಲಿ ಉಳಿದ ಸದಸ್ಯರನ್ನು ಸೇರ್ಪಡೆಗೊಳಿಸಿ ೧೦ ಕೋಟಿ ಗುರಿಯನ್ನು ಸುಲಭವಾಗಿ ಮುಟ್ಟಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶದ ಪ್ರಗತಿ, ಪ್ರಧಾನಿ ನರೇಂದ್ರ ಮೋದಿ ಕಾರ್ಯವೈಖರಿ ಮೆಚ್ಚಿ ಸ್ವಯಂಪ್ರೇರಿರಾಗಿ ಸದಸ್ಯತ್ವ ಪಡೆಯುತ್ತಿರುವುದು ಕಂಡು ಬರುತ್ತಿದೆ ಎಂದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ದುರಾಡಳಿತ ನಡೆಸುತ್ತಿದೆ. ವಾಲ್ಮೀಕಿ ನಿಗಮ, ಮೂಡ ಹಗರಣ ಈ ರೀತಿ ಹಗರಣಗಳ ಸರಮಾಲೆ ಬಯಲಾಗುತ್ತಿದೆ. ನೈತಿಕತೆ ಪಾಠ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಡ ಹಗರಣದಲ್ಲಿ ಪಾತ್ರವಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆ ತನಿಖೆಗೆ ಕೋರ್ಟ್ ಆದೇಶಿಸಿದೆ. ಸದನಗಳಲ್ಲಿ ಹಗರಣದ ಬಗ್ಗೆ ಚರ್ಚೆಗೆ ಬಿಜೆಪಿ ಅಪೇಕ್ಷಿಸಿತ್ತು. ಆದರೆ, ಕಲಾಪ ಮೊಟಕುಗೊಳಿಸಿ ಸಿದ್ದರಾಮಯ್ಯ ಪಲಾಯನಗೈದಿದ್ದರು. ಇವೆಲ್ಲ ಬೆಳವಣಿಗೆಯ ನಂತರ ಆತ್ಮಸಾಕ್ಷಿ ಕುರಿತು ಮಾತನಾಡುವ ಸಿದ್ದರಾಮಯ್ಯ ತಮ್ಮ ಆತ್ಮಸಾಕ್ಷಿಯನ್ನು ಕಳೆದುಕೊಂಡಿದ್ದಾರೆ. ವ್ಯಂಗ್ಯವಾಡಿದ ಅವರು, ಸಿದ್ದರಾಮಯ್ಯ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ ಮಾತನಾಡಿ, ಜಿಲ್ಲೆಯಲ್ಲಿ ೭೦ ಸಾವಿರ ಸದಸ್ಯತ್ವದ ಗುರಿ ಹೊಂದಲಾಗಿದ್ದು, ಸದ್ಯ ೨೩ ಸಾವಿರ ಸದಸ್ಯರು ನೋಂದಣಿಗೊAಡಿದ್ದಾರೆ. ಉಳಿದ ದಿನಗಳಲ್ಲಿ ಗುರಿ ಮುಟ್ಟಲಾಗುವುದು ಎಂದರು.

ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲೋಕೇಶ್, ಉಪಾಧ್ಯಕ್ಷ ಮನು ಮಂಜುನಾಥ್, ವಕ್ತಾರ ಬಿ.ಕೆ. ಅರುಣ್ ಕುಮಾರ್, ಮಾಧ್ಯಮ ಪ್ರಮುಖ್ ಸಜಿಲ್ ಕೃಷ್ಣನ್ ಹಾಜರಿದ್ದರು.