ಕಣಿವೆ, ಅ. ೪: ರಾಜ್ಯದಲ್ಲಿರುವ ಸರ್ಕಾರದ ಎಲ್ಲಾ ವಿವಿಗಳಿಗೆ ಸರ್ಕಾರ ಸಮರ್ಪಕವಾದ ಅನುದಾನ ನೀಡುವ ಮೂಲಕ ಶೈಕ್ಷಣಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಬೇಕು ಹಾಗೂ ರಾಜ್ಯವ್ಯಾಪಿ ಇರುವಂತಹ ೪೬೦ ಕ್ಕೂ ಹೆಚ್ಚಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಧ್ಯಾಪಕರನ್ನು ನೇಮಿಸಲು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು ರಾಜ್ಯ ವ್ಯಾಪಿ ಪ್ರತಿಭಟನೆಗೆ ಕರೆ ಕೊಟ್ಟ ಹಿನ್ನೆಲೆಯಲ್ಲಿ ಕುಶಾಲನಗರದಲ್ಲೂ ಎಬಿವಿಪಿ ವತಿಯಿಂದ ಪ್ರತಿಭಟನೆ ನಡೆಸಿ ತಾಲೂಕು ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ನೀಡಲಾಯಿತು.

ಪದವಿ ತರಗತಿಗಳು ಆರಂಭವಾಗಿ ೫೦ ದಿನಗಳು ಕಳೆದರೂ ಕೂಡ ಅತಿಥಿ ಉಪನ್ಯಾಸಕರನ್ನು ನೇಮಿಸುವ ಪ್ರಕ್ರಿಯೆಗೆ ಚಾಲನೆ ನೀಡಿಲ್ಲ. ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡುವ ವಿಚಾರದಲ್ಲಿ ವಿವಿಗಳು ಹಾಗೂ ಸರ್ಕಾರ ಸ್ಪಷ್ಟ ನಿಲುವು ಕೈಗೊಂಡು ವಿದ್ಯಾರ್ಥಿಗಳಿಗೆ ಆಗುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಬೇಕು.

ಯುಯುಸಿಎಂಸಿ ತಂತ್ರಾAಶದ ಬಳಕೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಹಾಗೂ ವಿವಿಗಳ ನಡುವೆ ಸಮನ್ವಯದ ಜೊತೆಗೆ ತಾಂತ್ರಿಕ ಪರಿಣಿತರ ಕೊರತೆಯಿಂದಾಗಿ ತಂತ್ರಾAಶದ ಸುಲಭ ಬಳಕೆಯ ಸಮಸ್ಯೆಯನ್ನು ಅಧಿಕಾರಿಗಳು ಬಗೆಹರಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕುಶಾಲನಗರದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಸಂದರ್ಭ ಎಬಿವಿಪಿ ತಾಲೂಕು ಸಂಚಾಲಕ ರೋಹಿತ್, ಪ್ರಮುಖರಾದ ಸೌರವ್, ಪವನ್, ಲಯನ, ಸೋನಾ, ಚಂದನ, ಬಿಪಿನ್, ಯಶಸ್ವಿನಿ ಮೊದಲಾದವರಿದ್ದರು.