ಸೋಮವಾರಪೇಟೆ, ಅ. ೪: ಇಲ್ಲಿನ ಅಬಕಾರಿ ಇಲಾಖಾಧಿಕಾರಿ ಗಳು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ತಯಾರಿಸಿದ್ದ ಕಳ್ಳಭಟ್ಟಿ ಹಾಗೂ ಮದ್ಯವನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಲಾಗಿದೆ.
ತಾಲೂಕಿನ ಬೆಂಬಳೂರು ಗ್ರಾಮದ ಬಸಮ್ಮ ಅವರ ಮನೆಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ೧೧ ಲೀಟರ್ ಕಳ್ಳಭಟ್ಟಿಯನ್ನು ವಶಪಡಿಸಿ ಕೊಂಡಿದ್ದಾರೆ. ಆರೋಪಿ ಬಸಮ್ಮ ಅವರ ಮೇಲೆ ಮೊಕದ್ದಮೆ ದಾಖಲಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಪಟ್ಟಣ ಸಮೀಪದ ಕಾನ್ವೆಂಟ್ ಬಾಣೆ ನಿವಾಸಿ ರಾಣಿ ಎಂಬವರು ತಮ್ಮ ಮನೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇಲೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಈ ಸಂದರ್ಭ ೯೦ ಮಿ.ಲೀ.ನ ೧೮ ಒರಿಜಿನಲ್ ಚಾಯ್ಸ್ ಬ್ರಾಂದಿ ಪ್ಯಾಕೆಟ್ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ರಾಣಿ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಅಬಕಾರಿ ಇಲಾಖೆಯ ಉಪ ನಿರೀಕ್ಷಕಿ ಕೆ.ವಿ. ಸುಮತಿ, ಅಬಕಾರಿ ನಿರೀಕ್ಷಕ ಆರ್.ಎ. ರಾಮಸ್ವಾಮಿ, ಅಬಕಾರಿ ಪೇದೆಗಳಾದ ಮಹಾದೇವ ಗಡ್ಡಿ, ಕಾಂತರಾಜ್, ಮಹಾಂತೇಶ್, ಹಿರಣ್ಣ ಮ್ಯಾಕೇರಿ, ಎಸ್. ಸುರೇಶ್, ವೀರೇಶ್ ಕುಮಾರ್ ಅವರುಗಳು ಭಾಗವಹಿಸಿದ್ದರು.