ಕೂಡಿಗೆ, ಅ. ೩: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯು ಈ ಸಾಲಿನಲ್ಲಿ ನವವಧುವಂತೆ ಶೃಂಗಾರಗೊಳ್ಳುತ್ತಿದೆ. ರಾಜ್ಯದ ಉಪ ಮುಖ್ಯಮಂತ್ರಿಯವರು ಹಾರಂಗಿ ಅಣೆಕಟ್ಟೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಇದ್ದ ಹಿನ್ನೆಲೆಯಲ್ಲಿ ಮತ್ತು ಮುಂದಿನ ದಿನಗಳಲ್ಲಿ ಕಾವೇರಿ ತೀರ್ಥೋದ್ಬವದ ಮರು ದಿನಗಳಲ್ಲಿ ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿರುವ ಕಾವೇರಿ ಮಾತೆಯ ಪ್ರತಿಮೆ ಪೂಜೋತ್ಸವ ಕಾರ್ಯಕ್ರಮಗಳು ನಡೆಯುವ ಹಿನ್ನೆಲೆಯಲ್ಲಿ ಅಣೆಕಟ್ಟೆಯು ಈ ಬಾರಿ ಸುಣ್ಣ ಬಣ್ಣಗಳಿಂದ ಶೃಂಗಾರಗೊಳ್ಳುತ್ತಿದೆ.

ಅಣೆಕಟ್ಟೆಯ ಮುಖ್ಯದ್ವಾರ ಸೇರಿದಂತೆ ಅಣೆಕಟ್ಟೆಯ ಮೇಲಿನ ವಿದ್ಯುತ್ ದೀಪಗಳ ಅಲಂಕಾರ, ದುರಸ್ತಿಗೊಂಡದ ದೀಪಗಳ ದುರಸ್ತಿ ಸೇರಿದಂತೆ ವಿವಿಧ ಶೃಂಗಾರದ ಕಾರ್ಯಗಳು ನೀರಾವರಿ ಇಲಾಖೆಯ ವತಿಯಿಂದ ನಡೆಯುತ್ತಿವೆ.

ಎರಡು ವರ್ಷಗಳಿಂದಲೂ ಬಾಗಿನ ಅರ್ಪಣೆಯಾಗದ

ಹಾರಂಗಿ ಜಲಾಶಯ

ಕಳೆದ ಸಾಲಿನಲ್ಲಿಯೂ ಜುಲೈ ಅಂತ್ಯ ತಿಂಗಳಲ್ಲಿ ಜಲಾಶಯ ಸಂಪೂರ್ಣವಾಗಿ ಭರ್ತಿಯಾದರೂ ಬಾಗಿನ ಅರ್ಪಣೆ ಕಾರ್ಯಕ್ರಮ ನಡೆಯಲಿಲ್ಲ. ಆದರೆ ಈ ಸಾಲಿನಲ್ಲಿ ಜುಲೈ ತಿಂಗಳಲ್ಲಿ ಸಂಪೂರ್ಣವಾಗಿ ಅಣೆಕಟ್ಟೆಯು ಭರ್ತಿಯಾಗಿ ಸಾವಿರಾರು ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಗಿದೆ. ಈಗಾಗಲೇ ಸೆಪ್ಟೆಂಬರ್ ತಿಂಗಳು ಕಳೆದರೂ ಸಹ ಅಣೆಕಟ್ಟೆಗೆ ಬಾಗಿನ ಅರ್ಪಿಸುವ ಪೂಜಾ ಕಾರ್ಯಕ್ರಮ ಇನ್ನೂ ನಡೆದಿಲ್ಲ.

ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿರುವ ಕಾವೇರಿ ಮಾತೆ ಪ್ರತಿಮೆಗೆ ವರ್ಷಂಪ್ರತಿಯAತೆ ಈ ಬಾರಿಯು ವಿಶೇಷ ಪೂಜಾ ಕಾರ್ಯಕ್ರಮ, ಪ್ರಸಾದ ವಿನಿಯೋಗ ಸೇರಿದಂತೆ ಪೂಜಾ ಕೈಂಕರ್ಯಗಳು ನಡೆಯಲಿವೆ ಎಂದು ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ ತಿಳಿಸಿದ್ದಾರೆ.