ಕುಶಾಲನಗರ, ಅ. ೨: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕೂರ್ಗ್ ಲಾರಿ ಚಾಲಕರು ಮತ್ತು ಮಾಲೀಕರ ಸಂಘದ ಜಿಲ್ಲಾ ಘಟಕದ ಕಚೇರಿ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಕುಶಾಲನಗರದ ರೈತ ಸಹಕಾರ ಭವನ ಸಮೀಪ ಆರಂಭಿಸಿರುವ ನೂತನ ಕಛೇರಿಯನ್ನು ಕುಶಾಲನಗರ ಕಾವೇರಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಎ. ಲೋಕೇಶ್ ಉದ್ಘಾಟಿಸಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಸ್ತಿತ್ವಕ್ಕೆ ಬಂದಿರುವ ನೂತನ ಜಿಲ್ಲಾ ಸಂಘ ಅಭಿವೃದ್ದಿಯತ್ತ ಸಾಗುವುದರೊಂದಿಗೆ ಸದಸ್ಯರ ಕಷ್ಟಗಳಿಗೆ, ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿ ಅಗತ್ಯ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಕೂರ್ಗ್ ಲಾರಿ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಕೆ.ಯು. ರಫೀಕ್ ಮಾತನಾಡಿ, ಸಂಘದ ಎಲ್ಲಾ ಸದಸ್ಯರ ಸಹಕಾರದಿಂದ ನೂತನ ಸಂಘ ಸ್ಥಾಪಿಸಿದ್ದು, ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಚಿಂತನೆ ಹೊಂದಲಾಗಿದೆ. ಅದೇ ರೀತಿ ಸಂಘದ ಸದಸ್ಯರ ಸರ್ವಾಂಗೀಣ ಅಭಿವೃದ್ಧಿಗೆ ಸಂಘ ಒತ್ತು ನೀಡಲಿದೆ ಎಂದು ತಿಳಿಸಿದರು. ನೂತನ ಸಂಘದ ಉದ್ಘಾಟನೆ ಹಿನ್ನಲೆಯಲ್ಲಿ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಒಳರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮಾಡಲಾಯಿತು.

ಈ ಸಂದರ್ಭ ಕುಶಾಲನಗರ ಕಾವೇರಿ ಲಾರಿ ಮಾಲೀಕರ ಸಂಘದ ಗೌರವ ಅಧ್ಯಕ್ಷ ರಾಮದಾಸ್, ವಿನೇಶ್, ಹಿರಿಯ ಚಾಲಕ ಬಿ.ಕೆ. ಭಾಸ್ಕರ್, ಕೂರ್ಗ್ ಲಾರಿ ಚಾಲಕರು ಮಾಲೀಕರ ಸಂಘದ ಗೌರವಾಧ್ಯಕ್ಷ ಕೆ.ಎಂ. ಕೃಷ್ಣ, ಉಪಾಧ್ಯಕ್ಷ ಅಶ್ರಫ್ ಎಂ., ಕಾರ್ಯದರ್ಶಿ ಇಬ್ರಾಹಿಂ ಹೆಚ್., ಸಹ ಕಾರ್ಯದರ್ಶಿ ಕಿರಣ್ ತಿಮ್ಮಯ್ಯ, ಖಜಾಂಚಿ ರಾಫಿ ಸಿ.ಕೆ., ನಿರ್ದೇಶಕರಾದ ಅಂಥೋಣಿ, ಟಿ.ಪಿ.ಎಸ್. ರಾಜು, ಕುಮಾರ ಬಿ., ಬಷೀರ್, ಶಫಿ, ಮತ್ತಿತರರು ಇದ್ದರು.