ಸುಂಟಿಕೊಪ್ಪ, ಸೆ. ೩೦: ತೋಟದಿಂದ ತೋಟಕ್ಕೆ ಅಲ್ಯುಮಿನಿಯಂ ಪೈಪ್ ಸ್ಥಳಾಂತರಗೊಳಿಸುವ ಸಂದರ್ಭ ವಿದ್ಯುತ್ ತಂತಿಗೆ ಸ್ಪರ್ಶಗೊಂಡು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನಡೆದಿದೆ.

ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳ್ಳೂರು ಗ್ರಾಮದ ಶಶಿಕಾಂತ್ ಎಂಬವರ ತೋಟದಲ್ಲಿ ಹಾವೇರಿ ಜಿಲ್ಲೆಯ ಹಾನಗಲು ತಾಲೂಕಿನ ಅಜೆಗುಂಡಿಕೊಪ್ಪ ನಿವಾಸಿ ಯಲ್ಲಪ್ಪ (೫೭) ಮೃತ ದುರ್ದೈವಿ. ಸೋಮವಾರ ಬೆಳಿಗ್ಗೆ ಎಂದಿನAತೆ ತೋಟದ ಕೆಲಸಕ್ಕೆ ಯಲ್ಲಪ್ಪ ತೆರಳಿದ್ದು, ತೋಟದಲ್ಲಿದ್ದ ಅಲ್ಯುಮಿನಿಯಂ ಪೈಪ್‌ಗಳನ್ನು ಮತ್ತೊಂದು ತೋಟಕ್ಕೆ ಕೊಂಡೊಯ್ಯುವಾಗ ಆಕಸ್ಮಿಕವಾಗಿ ಪೈಪ್ ವಿದ್ಯುತ್ ತಂತಿಗೆ ತಗುಲಿದ್ದರಿಂದ ವಿದ್ಯುತ್ ಸ್ಪರ್ಶಗೊಂಡು ಯಲ್ಲಪ್ಪ ಕುಸಿದು ಬಿದ್ದಿದ್ದಾರೆ.

ಚಿಕಿತ್ಸೆಗಾಗಿ ಕುಶಾಲನಗರ ಸರಕಾರಿ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುವ ವೇಳೆ ಮಾರ್ಗಮಧ್ಯೆ ಅಸುನೀಗಿದ್ದಾರೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.