ಸೋಮವಾರಪೇಟೆ, ಸೆ. ೩೦: ಮೂರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕೊಡವ ಸಮುದಾಯದ ಪೋಷಕರನ್ನು ಕೊಡವ ಸಮಾಜದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸನ್ಮಾನಿಸಲು ತೀರ್ಮಾನಿಸಲಾಗಿದೆ ಎಂದು ಇಲ್ಲಿನ ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್ ಹೇಳಿದರು.

ಸ್ಥಳೀಯ ಕೊಡವ ಸಮಾಜ ಸಭಾಂಗಣದಲ್ಲಿ, ಸಮಾಜದ ವತಿಯಿಂದ ಆಯೋಜಿಸಿದ್ದ ಕೈಲ್ ಮುಹೂರ್ತ ಸಂತೋಷಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಶ್ವದಲ್ಲಿಯೇ ವಿಶಿಷ್ಟ ಅಚಾರ-ವಿಚಾರ, ಸಂಸ್ಕೃತಿಯನ್ನು ಹೊಂದಿರುವ ಕೊಡವ ಜನಾಂಗದ ಜನಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಜನಾಂಗದ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಹಿನ್ನೆಲೆ ಮೂರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕೊಡವ ಪೋಷಕರನ್ನು ಸನ್ಮಾನಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದರು.

ಕೊಡವರು ತಮ್ಮ ಹಬ್ಬಾಚರಣೆ ಗಳಿಂದ ವಿಮುಖರಾಗಬಾರದು. ಸಂಸ್ಕೃತಿಯ ಪ್ರತೀಕವಾಗಿರುವ ಹಬ್ಬಗಳ ಆಚರಣೆ ಮೂಲಕ ಸಮುದಾಯ ಒಂದಾಗಿರಬೇಕು. ಕೊಡವ ಸಂಸ್ಕೃತಿಯ ಆಚಾರ ವಿಚಾರಗಳನ್ನು ನಾವುಗಳು ಪಾಲಿಸಿಕೊಂಡು, ಅದನ್ನು ನಮ್ಮ ಯುವ ಜನಾಂಗಕ್ಕೂ ಕಲಿಸಬೇಕು ಎಂದು ಕಿವಿಮಾತು ಹೇಳಿದರು.

ಕೊಡವ ಸಮಾಜಕ್ಕೆ ಒಳಪಟ್ಟಿರುವ ಚೌಡ್ಲು ಗ್ರಾಮದಲ್ಲಿರುವ ಜಾಗದಲ್ಲಿ ಮುಂದಿನ ದಿನಗಳಲ್ಲಿ ಭವನ ನಿರ್ಮಾಣಕ್ಕೆ ತೀರ್ಮಾನಿಸಲಾಗಿದ್ದು, ಇದಕ್ಕೆ ಸಮುದಾಯ ಬಾಂಧವರು ಸಹಕಾರ ನೀಡಬೇಕು. ೧೮ ವರ್ಷ ಮೇಲ್ಪಟ್ಟ ಕೊಡವ ಸಮುದಾಯಕ್ಕೆ ಸೇರಿದ ಎಲ್ಲರೂ ಸಹ ಸಮಾಜದ ಸದಸ್ಯತ್ವ ಪಡೆಯಬೇಕು ಎಂದ ಅವರು, ಡಿಸೆಂಬರ್ ೨೪ ಹಾಗೂ ೨೫ರಂದು ಸಮಾಜದ ಸಭಾಂಗಣದಲ್ಲಿ ಅದ್ದೂರಿಯಾಗಿ ಸುವರ್ಣ ಮಹೋತ್ಸವ ನಡೆಸಲು ತೀರ್ಮಾನಿಸ ಲಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಟ್ಟಚೆರವಂಡ ಕೆ. ನಾಚಪ್ಪ ಮಾತನಾಡಿ, ವೀರ ಪರಂಪರೆ ಹೊಂದಿರುವ ಕೊಡವ ಸಂಸ್ಕೃತಿ ಉಳಿಯಬೇಕು. ಭಾರತೀಯ ಸೈನ್ಯದಲ್ಲಿ ಕೊಡವ ಸೈನಿಕರಿಗೆ ವಿಶೇಷ ಗೌರವವಿದೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಂತಹ ಮಹಾನ್ ನಾಯಕರ ಕೆಚ್ಚೆದೆಯ ಹೋರಾಟಗಳು ಇಂದಿಗೂ ಕೊಡಗಿನ ಹೆಸರನ್ನು ಚಿರಸ್ಥಾಯಿಯಾಗಿಸಿದೆ ಎಂದು ಅಭಿಪ್ರಾಯಿಸಿದರು.

ಕೊಡವ ಸಮುದಾಯದ ಯುವ ಜನಾಂಗ ವಿದ್ಯಾಭ್ಯಾಸಕ್ಕೆ ಹೆಚ್ಚು ಆಸಕ್ತಿ ತೋರಬೇಕು. ಕೇವಲ ಕಂಪೆನಿ ಉದ್ಯೋಗಕ್ಕೆ ಸೀಮಿತವಾಗದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ಶೈಕ್ಷಣಿಕವಾಗಿ ಹೆಚ್ಚಿನ ಸಾಧನೆ ತೋರಬೇಕೆಂದರು.

ನಮ್ಮ ಪೂರ್ವಿಕರು ನಮಗೆ ಉಳಿಸಿಕೊಟ್ಟಿರುವ ಜಾಗವನ್ನು ಯಾವುದೇ ಸಂದರ್ಭದಲ್ಲೂ ಹೊರಗಿನವರಿಗೆ ಮಾರಾಟ ಮಾಡಬಾರದು. ಭೂಮಿಯ ಬಗ್ಗೆ ಭಾವನಾತ್ಮಕ ಸಂಬAಧ ಇಟ್ಟುಕೊಳ್ಳಬೇಕು. ಹಿರಿಯರು ಕೊಟ್ಟ ಈ ಭೂಮಿಯನ್ನು ರೆಸಾರ್ಟ್, ಹೋಂ ಸ್ಟೇಗಳಿಗಾಗಿ ಮಾರಾಟ ಮಾಡಬಾರದು ಎಂದು ಕಿವಿಮಾತು ಹೇಳಿದರು.

ಉದ್ಯೋಗಕ್ಕಾಗಿ ಹೊರಭಾಗದಲ್ಲಿ ನೆಲೆಸಿದ್ದರೂ ಸಹ ನಮ್ಮ ಮೂಲ ನೆಲೆಯನ್ನು ಯಾರಿಗೂ ಬಿಟ್ಟುಕೊಡಬಾರದು ಎಂದು ಮನವಿ ಮಾಡಿದ ನಾಚಪ್ಪ ಅವರು, ಕೊಡವ ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ೧೦ ಸಾವಿರ ರೂ. ಕೊಡುಗೆ ನೀಡಿದರು.

ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷ ಬೊಳಂದAಡ ಕುಟ್ಟಪ್ಪ, ಕಾರ್ಯದರ್ಶಿ ಕೊಚ್ಚೆರ ಅನಿಲ್ ಉಪಸ್ಥಿತರಿದ್ದರು. ಮಲ್ಲಾಜಿರ ಸುನು ಕಿಶೋರ್, ಹಂಚೆಟ್ಟಿರ ಸಾರಿಕ ತಮ್ಮಯ್ಯ, ಪೋರೆರ ಖುಷಿ, ಅಜ್ಜಮಕ್ಕಡ ಅಕ್ಷಿತಾ ಕಾರ್ಯಪ್ಪ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು. ಸಾರಿಕ ತಮ್ಮಯ್ಯ ಮತ್ತು ಕಂಬೆಯAಡ ಸೀತಾಲಕ್ಷಿö್ಮÃ ಅವರುಗಳಿಂದ ಕೊಡವ ಭಾಷೆಯ ಗೀತಗಾಯನ ನಡೆಯಿತು. ಕಾರ್ಯಕ್ರಮದ ನಂತರ ವಿವಿಧ ಸ್ಪರ್ಧೆಗಳು ಜರುಗಿದವು. ಕೊಡವ ವಾಲಗಕ್ಕೆ ಕೊಡವರು ಹೆಜ್ಜೆ ಹಾಕಿ ಸಂಭ್ರಮಿಸಿದರು.